ಬಡವರಿಗೆ ಹಕ್ಕುಪತ್ರ ನೀಡುವುದು ಶಾಸಕರಿಗೆ ಒಪ್ಪಿಗೆ ಇಲ್ಲವೇ.?

ಶಾಸಕರು ಮೊದಲು ತಾವು ಶಿಷ್ಟಾಚಾರವನ್ನು ಪಾಲಿಸಲಿ ಶುಭದ ರಾವ್

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರು ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಶಾಸಕರು ಅಧಿಕಾರಿಗಳ ಮೇಲೆ ದರ್ಪ ತೋರಿರುವುದು ಅವರ ವೈಫಲ್ಯ ಮತ್ತು 21 ವರ್ಷಗಳ ಅಧಿಕಾರದ ಅಹಂಕಾರವನ್ನು ಪ್ರದರ್ಶಿಸುತ್ತದೆ ಎಂದು ಆರೋಪಿಸಿದ್ದಾರೆ.
​ನಿಟ್ಟೆಯ ಹಿರಿಯ ನಾಗರಿಕ ಸುರೇಶ್ ಆಚಾರ್ಯ ಅವರು ಕಷ್ಟಪಟ್ಟು ತಹಶೀಲ್ದಾರ್ ಮೂಲಕ ಹಕ್ಕುಪತ್ರ ಪಡೆದಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಶಾಸಕರು ಸಭೆಯಲ್ಲಿ ಬಿಂಬಿಸಿದ್ದಾರೆ. ಎರಡು ದಶಕಗಳಿಂದ ಆ ಬಡ ಕುಟುಂಬಕ್ಕೆ ಹಕ್ಕುಪತ್ರ ನೀಡದ ಶಾಸಕರು, ಈಗ ಬಡವರ ಪರ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಕೂಗಾಡುತ್ತಿರುವುದು ಅವರ ಬಡವರ ವಿರೋಧಿ ಮನಸ್ಥಿತಿ ಹಾಗೂ ಅಧಿಕಾರದ ಹಪಹಪಿಯನ್ನು ತೋರಿಸುತ್ತದೆ ಎಂದು ರಾವ್ ಟೀಕಿಸಿದ್ದಾರೆ.
​ಶಿಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕರು, ಕಾರ್ಕಳದಲ್ಲಿ ತಾವು ನಡೆಸುವ ಗುದ್ದಲಿ ಪೂಜೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸ್ವಪಕ್ಷ ಹಾಗೂ ವಿರೋಧ ಪಕ್ಷದ ಯಾವುದೇ ಜನಪ್ರತಿನಿಧಿಗಳ ಹೆಸರು ಅಥವಾ ಭಾವಚಿತ್ರ ಬಳಸದೆ ಶಿಷ್ಟಾಚಾರವನ್ನು ಸದಾ ಗಾಳಿಗೆ ತೂರುತ್ತಾರೆ. ಸ್ವತಃ ನಿಯಮ ಪಾಲಿಸದ ಶಾಸಕರು ಅಧಿಕಾರಿಗಳಿಗೆ ಉಪದೇಶ ನೀಡುವ ನೈತಿಕತೆ ಹೊಂದಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.













error: Content is protected !!
Scroll to Top