ಆನ್‌ಲೈನ್ ಔಷಧಿ ಮಾರಾಟಕ್ಕೆ ವಿರೋಧ: 20 ರಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್

ಬೆಂಗಳೂರು: ಬ್ಲಿಂಕಿಟ್, ಸ್ವಿಗ್ಗಿ, ಜೊಮಾಟೊ ಸೇರಿದಂತೆ ವಿವಿಧ ಆನ್‌ಲೈನ್ ಆಪ್‌ಗಳ ಮೂಲಕ ಔಷಧಿಗಳ ಮುಕ್ತ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಮೇ 20ರಂದು (ನಾಳೆ) ದೇಶಾದ್ಯಂತ ಮೆಡಿಕಲ್ ಸ್ಟೋರ್‌ಗಳ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘವೂ (ಕೆಡಿಎ) ಬೆಂಬಲ ಸೂಚಿಸಿದ್ದು, ನಾಳೆ ರಾಜ್ಯಾದ್ಯಂತ ಔಷಧಾಲಯಗಳು ಸಂಪೂರ್ಣ ಬಂದ್ ಆಗಲಿವೆ.
ಹೀಗಾಗಿ ಸಾರ್ವಜನಿಕರು ತಮಗೆ ತುರ್ತಾಗಿ ಬೇಕಾಗುವ ಅಗತ್ಯ ಔಷಧಿಗಳನ್ನು ಇಂದೇ ಖರೀದಿಸಿ ಇಟ್ಟುಕೊಳ್ಳುವಂತೆ ಸಂಘಟನೆಗಳು ಮನವಿ ಮಾಡಿವೆ.
26 ಸಾವಿರ ಮೆಡಿಕಲ್ ಸ್ಥಗಿತ
ಬುಧವಾರ (ಮೇ 20) ಮಧ್ಯರಾತ್ರಿ 12.01 ರಿಂದ ಆರಂಭವಾಗಲಿರುವ ಈ ಮುಷ್ಕರವು ಅಂದೇ ರಾತ್ರಿ 11:59 ರವರೆಗೆ ಮುಂದುವರಿಯಲಿದೆ. ಕರ್ನಾಟಕವೊಂದರಲ್ಲೇ 26,000ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಾಗಿಲು ಮುಚ್ಚಲಿವೆ. ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ (ಎಐಒಸಿಡಿ) ಕರೆಯನ್ನು ಬೆಂಬಲಿಸಿ ದೇಶದಾದ್ಯಂತ ಸುಮಾರು 12.4 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೊರೊನಾ ಕಾಲದ ನಿಯಮ ದುರುಪಯೋಗ: ವ್ಯಾಪಾರಿಗಳ ಆಕ್ರೋಶ

ಕೋವಿಡ್ ಸಾಂಕ್ರಾಮಿಕದ ತುರ್ತು ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆನ್‌ಲೈನ್ ಮೂಲಕ ಔಷಧಿ ಮಾರಾಟ ಮಾಡಲು ತಾತ್ಕಾಲಿಕ ಅನುಮತಿ ನೀಡಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಮುಖ ಆಪ್ ಆಧಾರಿತ ಕಂಪನಿಗಳು ಈಗ ವ್ಯವಹಾರ ವಿಸ್ತರಿಸುತ್ತಿವೆ. ಇದರಿಂದಾಗಿ ಕಾನೂನುಬದ್ಧವಾಗಿ ಪರವಾನಗಿ ಪಡೆದು ವ್ಯಾಪಾರ ಮಾಡುತ್ತಿರುವ ಲಕ್ಷಾಂತರ ಸಾಂಪ್ರದಾಯಿಕ ಮೆಡಿಕಲ್ ಮಾಲೀಕರ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ.”

ಔಷಧಿ ವ್ಯಾಪಾರಿಗಳ ಸಂಘ ಕೇಂದ್ರದ ವಿರುದ್ಧ ಅಸಮಾಧಾನ
ಆನ್‌ಲೈನ್ ಔಷಧಿ ಮಾರಾಟ ಜಾಲಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಾಗೂ ಚಿಲ್ಲರೆ ಔಷಧಿ ವ್ಯಾಪಾರಿಗಳ ಹಿತರಕ್ಷಣೆಗಾಗಿ ಈ ಅನಿವಾರ್ಯ ಹೋರಾಟಕ್ಕೆ ಇಳಿಯಬೇಕಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಗಮನಿಸಿ: ತುರ್ತು ಪರಿಸ್ಥಿತಿ ಹಾಗೂ ಆಸ್ಪತ್ರೆ ಆವರಣದಲ್ಲಿರುವ ಮೆಡಿಕಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆಯಾದರೂ, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಮುನ್ನೆಚ್ಚರಿಕೆಯಾಗಿ ಅಗತ್ಯ ಔಷಧಿಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುವುದು ಸೂಕ್ತ.













































\















error: Content is protected !!
Scroll to Top