ನಿಯಮ ಉಲ್ಲಂಘನೆ: ಉಡುಪಿ ಜಿಲ್ಲೆಯ 415 ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ನೋಟಿಸ್‌

ಕೆಪಿಎಂಇ ಕಾಯ್ದೆ ಅಡಿ ತಾಲೂಕು ಪ್ರಾಧಿಕಾರದ ದಿಢೀರ್ ತಪಾಸಣೆ ತೀವ್ರ

ಕಾರ್ಕಳ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅಡಿಯ ಕಡ್ಡಾಯ ನಿಯಮಾವಳಿಗಳನ್ನು ಪಾಲಿಸದ ಜಿಲ್ಲೆಯ ಒಟ್ಟು 415 ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ತಾಲೂಕು ಪ್ರಾಧಿಕೃತ ಅಧಿಕಾರಿಗಳ ಪರಿಶೀಲನಾ ಸಮಿತಿಯು ಅಧಿಕೃತವಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
​2025ರ ಸೆಪ್ಟೆಂಬರ್‌ನಿಂದ 2026ರ ಏಪ್ರಿಲ್‌ವರೆಗೆ ಸಮಿತಿಯು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳ ಒಟ್ಟು 334 ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಮೂಲಸೌಕರ್ಯ, ಅಗ್ನಿ ಸುರಕ್ಷತೆ ಹಾಗೂ ದರಪಟ್ಟಿ ಪ್ರದರ್ಶನ ಸೇರಿದಂತೆ ಹಲವು ಕಡ್ಡಾಯ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ.
ತಾಲೂಕುವಾರು ನೋಟಿಸ್ ವಿವರ:
​ಕುಂದಾಪುರ: 248 (ಹಳೆಯ ಬಾಕಿ ಪ್ರಕರಣಗಳು ಸೇರಿ)
​ಉಡುಪಿ: 102
​ಕಾರ್ಕಳ: 65
ಪತ್ತೆಯಾದ ಪ್ರಮುಖ ದೋಷಗಳು:
​ತಪಾಸಣೆಯ ಸಂದರ್ಭದಲ್ಲಿ ಹಲವು ಆಸ್ಪತ್ರೆಗಳಲ್ಲಿ ಅಗ್ನಿ ನಿರೋಧಕ ಸಾಧನಗಳ ಕೊರತೆ, ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಿಲ್ಲದಿರುವುದು ಹಾಗೂ ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸದಿರುವುದು ಕಂಡುಬಂದಿದೆ. ಸರ್ಕಾರದ ಕಠಿಣ ನಿಯಮಗಳನ್ನು ಕಡೆಗಣಿಸಿದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಪ್ರಸ್ತುತ ಉಡುಪಿಯ 120, ಕುಂದಾಪುರದ 94 ಹಾಗೂ ಕಾರ್ಕಳದ 120 ಖಾಸಗಿ ಆರೋಗ್ಯ ಸಂಸ್ಥೆಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಲಾಗಿದೆ.
ಸರಿಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ
“ಕೆಲವು ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಇನ್ನುಳಿದ ಬಹುತೇಕ ಸಂಸ್ಥೆಗಳು ನಿಯಮ ಪಾಲಿಸಿವೆ. ನೋಟಿಸ್ ಪಡೆದಿರುವ ಆರೋಗ್ಯ ಸಂಸ್ಥೆಗಳು ನಿಗದಿತ ಅವಧಿಯೊಳಗೆ ಸೂಕ್ತ ವಿವರಣೆ ನೀಡಬೇಕು. ಲೋಪದೋಷಗಳನ್ನು ಸರಿಪಡಿಸಿಕೊಳ್ಳದ ಆರೋಗ್ಯ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ವಹಿಸಲಾಗುವುದು.”
– ಡಾ. ಸಂದೀಪ್ ಕುಡ್ವ, ಅಧ್ಯಕ್ಷರು, ಆರೋಗ್ಯ ಇಲಾಖೆ ತಾಲೂಕು ಪ್ರಾಧಿಕೃತ ಅಧಿಕಾರಿಗಳ ಪರಿಶೀಲನಾ ಸಮಿತಿ.
ಏನಿದು ಕೆ.ಪಿ.ಎಂ.ಇ. ನಿಯಮಾವಳಿ?
​ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ನಿಗಾ ಇಡಲು ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡಲು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ’ ಜಾರಿಯಲ್ಲಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ಪತ್ರೆ, ಲ್ಯಾಬ್ ಹಾಗೂ ಕ್ಲಿನಿಕ್‌ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು.
​ಕಾಯ್ದೆಯ ಪ್ರಮುಖ ಅಂಶಗಳು:
​ಕಡ್ಡಾಯ ದರಪಟ್ಟಿ: ಆಸ್ಪತ್ರೆ ಪ್ರವೇಶ ದ್ವಾರ ಅಥವಾ ರಿಸೆಪ್ಷನ್‌ನಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಯಾವ ಚಿಕಿತ್ಸೆಗೆ ಎಷ್ಟು ವೆಚ್ಚ ತಗುಲುತ್ತದೆ ಎಂಬ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
​ವೈಜ್ಞಾನಿಕ ತ್ಯಾಜ್ಯ ವಿಲೇವಾರಿ: ಸೂಜಿ, ಸಿರಿಂಜ್, ರಕ್ತಸಿಕ್ತ ಹತ್ತಿ, ಬ್ಯಾಂಡೇಜ್ ಹಾಗೂ ಮಾನವ ಅಂಗಾಂಶಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಗೀಕರಿಸಿದ ಸಂಸ್ಥೆಗಳ ಮೂಲಕವೇ ಕಟ್ಟುನಿಟ್ಟಾಗಿ ವಿಲೇವಾರಿ ಮಾಡಬೇಕು.
ಅಗ್ನಿ ಸುರಕ್ಷತೆ: ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಅಗ್ನಿ ನಿರೋಧಕ ಸಾಧನಗಳು ಹಾಗೂ ಸಕಾಲದಲ್ಲಿ ರೀಫಿಲ್ ಮಾಡಿದ ಅಗ್ನಿಶಾಮಕ ಸಿಲಿಂಡರ್‌ಗಳ ಅಳವಡಿಕೆ ಕಡ್ಡಾಯ.
​ದಾಖಲೆಗಳ ನಿರ್ವಹಣೆ: ಮಾನ್ಯತೆ ಪಡೆದ ವೈದ್ಯರು ಮತ್ತು ದಾದಿಯರೇ (ನರ್ಸ್) ಇರಬೇಕು. ಆಸ್ಪತ್ರೆಯ ಸ್ವಚ್ಛತೆ, ಔಷಧಗಳ ದಾಸ್ತಾನು ವಿವರ ಹಾಗೂ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಕಡ್ಡಾಯವಾಗಿದೆ.





































































































error: Content is protected !!
Scroll to Top