ಕೇರಳ ಸಂಪುಟದಲ್ಲಿ ಕಾಸರಗೋಡಿಗೆ ಮತ್ತೆ ನಿರಾಸೆ: ಗಡಿನಾಡಿನ ಆಸೆಗಳ ಮೇಲೆ ತಣ್ಣೀರು

ಕಾಸರಗೋಡು: ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು 20 ಸದಸ್ಯರ ಸಂಪುಟ ಸೋಮವಾರ ಪ್ರಮಾಣವಚನ ಸ್ವೀಕರಿಸಿದೆ. ಆದರೆ, ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕಡೆ ಯುಡಿಎಫ್ (UDF) ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ಕಾಸರಗೋಡಿಗೆ ಒಂದು ಸಚಿವ ಸ್ಥಾನವೂ ಸಿಗದಿರುವುದು ಗಡಿನಾಡಿನ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
​ಮಂಜೇಶ್ವರದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ 29,252 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದ ಯುಡಿಎಫ್ (ಮುಸ್ಲಿಂ ಲೀಗ್) ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರಿಗೆ ಸಚಿವ ಸ್ಥಾನ ಖಾತರಿ ಎಂದೇ ಭಾವಿಸಲಾಗಿತ್ತು. ಮುಸ್ಲಿಂ ಲೀಗ್ ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಉದುಮ, ಹೊಸದುರ್ಗ ಹಾಗೂ ತೃಕರಿಪುರ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
​ಸಚಿವ ಸ್ಥಾನದ ಇತಿಹಾಸ ಮತ್ತು ಪ್ರಸ್ತುತ ಹಿನ್ನಡೆ:
​2016-2021: ಮೊದಲ ಪಿಣರಾಯಿ ಸಂಪುಟದಲ್ಲಿ ಕಾಂಞಂಗಾಡ್‌ನ ಇ. ಚಂದ್ರಶೇಖರನ್ ಕಂದಾಯ ಸಚಿವರಾಗಿದ್ದರು. ಇದೇ ಜಿಲ್ಲೆಗೆ ಸಿಕ್ಕ ಕೊನೆಯ ಸಚಿವ ಸ್ಥಾನ. ಕಳೆದ 5 ವರ್ಷಗಳಿಂದ ಜಿಲ್ಲೆಗೆ ಯಾವುದೇ ಪ್ರಾತಿನಿಧ್ಯವಿರಲಿಲ್ಲ.
​ಹಿಂದಿನ ಪ್ರಾತಿನಿಧ್ಯ: ಈ ಹಿಂದೆ ಜಿಲ್ಲೆಯಿಂದ ಚೆರ್ಕಳಂ ಅಬ್ದುಲ್ಲಾ (2001-2004, ಸ್ಥಳೀಯಾಡಳಿತ) ಮತ್ತು ಸಿ.ಟಿ. ಅಹ್ಮದಾಲಿ (1991-95 ಸ್ಥಳೀಯಾಡಳಿತ, 1995-96 ಲೋಕೋಪಯೋಗಿ ಸಚಿವರಾಗಿದ್ದರು. 1970-77ರ ಅವಧಿಯಲ್ಲಿ ಎನ್.ಕೆ. ಬಾಲಕೃಷ್ಣನ್ ಆರೋಗ್ಯ ಸಚಿವರಾಗಿದ್ದರು.
​ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿರುವ ಕಾಸರಗೋಡು ಪ್ರತಿಬಾರಿಯೂ ಕಡೆಗಣನೆಗೆ ಒಳಗಾಗುತ್ತಿದೆ. ಈ ಹಿಂದಿನ ಪಿಣರಾಯಿ ಸರ್ಕಾರದ ಅವಧಿಯಲ್ಲಿ ತರಲಾಗಿದ್ದ ಕೇರಳಂ ಭಾಷಾ ಮಸೂದೆ ಗಡಿನಾಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಲಾದರೂ ಹೊಸ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಕಾಸರಗೋಡಿನ ಮೂಲಸೌಕರ್ಯಗಳ ಬೇಡಿಕೆಗೆ ಸ್ಪಂದಿಸುವರೇ ಎಂದು ಕಾದು ನೋಡಬೇಕಿದೆ.

















































error: Content is protected !!
Scroll to Top