ಮೇ 26ರಿಂದ ಮುಂಗಾರು ಮಳೆ ಮುನ್ಸೂಚನೆ – ವಿಕೋಪ ನಿಭಾಯಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಕರೆ

ಉಡುಪಿ : ಮೇ 26 ರಿಂದ ಮುಂಗಾರು ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಸೇರಿದಂತೆ ಅವಘಡಗಳ ಪರಿಸ್ಥಿತಿಗಳನ್ನು ಎದುರಿಸಲು ಎಲ್ಲ ಇಲಾಖಾಧಿಕಾರಿಗಳು ರಕ್ಷಣಾ ಸಾಮಗ್ರಿಗಳೊಂದಿಗೆ ಸನ್ನದ್ಧರಾಗಬೇಕು. ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಪ್ರಕೃತಿ ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಮುಂದಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮೇ 19ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ (ಮಾನ್ಸೂನ್) ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನ ಚರಂಡಿ, ತೋಡುಗಳನ್ನು ಸ್ವಚ್ಛಗೊಳಿಸಿ, ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಇದರಿಂದ ರೋಗ ರುಜಿನಗಳು ಹರಡದಂತೆ ತಡೆಯಲು ಸಾಧ್ಯ ಎಂದ ಅವರು, ಅತಿವೃಷ್ಠಿ ಸಂಭವಿಸಿದಾಗ ತುರ್ತು ವಿಪತ್ತು ನಿರ್ವಹಣೆಗಾಗಿ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಸಲಹೆ ನೀಡಿದರು.

ಕಂಟ್ರೋಲ್‌ ರೂಂ
ನಗರ ವ್ಯಾಪ್ತಿಯ ಪ್ರತಿಯೊಂದು ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ಕಂಟ್ರೋಲ್ ರೂಂಗಳನ್ನು ದಿನದ 24 ತೆರೆಯುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನೇಮಕ ಮಾಡಿ, ತಾಲೂಕು ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಿರಂತರವಾಗಿ ಮಾಡಬೇಕು. ಒಂದೊಮ್ಮೆ ಕಲುಷಿತ ನೀರು ಕಂಡುಬಂದಲ್ಲಿ ಪುನಶ್ಚೇತನಗೊಳಿಸುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಮಾನ್ಸೂನ್ ಟಾಸ್ಕ್ ಫೋರ್ಸ್ ರಚಿಸಿ ಸಮಸ್ಯೆಗಳುಂಟಾದಲ್ಲಿ ಕೂಡಲೇ ಸ್ಪಂದಿಸಬೇಕು. ಕುಂದು ಕೊರತೆಗಳನ್ನು ಮಾಹಿತಿ ನೀಡಲು ತುರ್ತು ಸಂಪರ್ಕ ದೂರವಾಣಿಯನ್ನು ಸ್ಥಾಪಿಸಿ, ಈ ಬಗ್ಗೆ ಪ್ರಚಾರ ಪಡಿಸಬೇಕು. ಹೆದ್ದಾರಿಗಳಿಗೆ ಅಡ್ಡಲಾಗಿ ಬಿದ್ದಂತಹ ಮರಗಳನ್ನು ತುರ್ತು ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕೆಂದು ಸೂಚನೆ ನೀಡಿದರು.

ಮರವಂತೆ ಬೀಚಿನ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆಯಿಂದ ಅಪಘಾತಗಳು ಉಂಟಾಗುತ್ತಿವೆ. ಈ ಬಗ್ಗೆ ವಾಹನಗಳ ನಿಲುಗಡೆ ಇಲ್ಲವೆಂಬ ಫಲಕಗಳನ್ನು ಅಳವಡಿಸಬೇಕು ಹಾಗೂ ರಸ್ತೆ ಬದಿಯಲ್ಲಿರುವ ಗೂಡಂಗಡಿಗಳ ತೆರವಿಗೆ ಕ್ರಮವಹಿಸಬೇಕು ಎಂದರು.

ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸ್ಥಳೀಯ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ರಸ್ತೆ ಮೇಲೆ ಬೀಳುವ ಮರಗಳನ್ನು ತಕ್ಷಣಕ್ಕೆ ಸ್ಪಂದಿಸಿ, ತೆರವುಗೊಳಿಸಲು ಸನ್ನದ್ಧರಾಗಿರಬೇಕು ಎಂದ ಡಿಸಿಯವರು ಗಾಳಿ-ಮಳೆಯಿಂದ ಮರಗಳು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ತಕ್ಷಣವೇ ಪುನರ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಸಾಂಕ್ರಾಮಿಕ ರೋಗ ಹರಡದಂತೆ ಕ್ರಮವಹಿಸಿ
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಯಿಲೆಗಳಿಗೆ ಬೇಕಾಗುವ ಔಷಧ, ಚುಚ್ಚುಮದ್ದುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆರೋಗ್ಯ ಇಲಾಖೆಯ ಕಂಟ್ರೋಲ್ ರೂಂಗಳು ದಿನ ಪೂರ್ತಿ ಸಕ್ರಿಯವಾಗಿರಬೇಕು. ಡೆಂಗ್ಯೂ, ಮಲೇರಿಯಾ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ದುರಸ್ಥಿಯ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಕಾಳಜಿ ಕೇಂದ್ರಗಳನ್ನು ತೆರೆಯಲು ಸೂಕ್ತ ಶಾಲಾ ಕಟ್ಟಡವನ್ನು ಸಿದ್ಧವಾಗಿಟ್ಟುಕೊಂಡಿರಬೇಕು ಎಂದರು.

ಮಳೆಗಾಲದಲ್ಲಿ ಪ್ರಾಣಿಗಳ ಅಸಹಜ ಸಾವು ಸಂಭವಿಸಿದ್ದಲ್ಲಿ ಅವುಗಳ ಮರಣೋತ್ತರ ವರದಿಯನ್ನು ಶೀಘ್ರವಾಗಿ ಒದಗಿಸಬೇಕು. ಸಾಕುಪ್ರಾಣಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ, ಚುಚ್ಚುಮದ್ದುಗಳನ್ನು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ಹೆಚ್ಚಿನ ಪ್ರವಾಹವಾಗಿರುವ ಸ್ಥಳಗಳನ್ನು ಗುರುತಿಸಿ, ಈಗಿನಿಂದಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಾಲೂಕುಗಳಲ್ಲಿ ಲಭ್ಯವಿರುವ ಬೋಟುಗಳು ಮತ್ತು ಈಜುಗಾರರ ಸಂಪೂರ್ಣ ಮಾಹಿತಿಯನ್ನು ಪಡೆಯುವುದರೊಂದಿಗೆ ತುರ್ತು ಸಂದರ್ಭಗಳಲ್ಲಿಅವರನ್ನು ಬಳಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಗಣಿಗಾರಿಕೆ ನಡೆದ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆ, ಈಜಾಟ ನಿಷೇಧಿಸಿದೆ ಎಂಬ ಎಚ್ಚರಿಕೆಯ ಫಲಕವನ್ನು ಹಾಕಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಕಾಲುಸಂಕಗಳ ಸ್ಥಿತಿ-ಗತಿಗಳ ಪರಿಶೀಲನೆ ನಡೆಸಿ, ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕಗಳ ದುರಸ್ತಿ ಕಾರ್ಯಗಳನ್ನು ಮಾಡಬೇಕು ಎಂದ ಅವರು ಅಪಾಯಕಾರಿ ಕಾಲುಸಂಕಗಳಿದ್ದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯ ಕರಾವಳಿ ತೀರದಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಸಮುದ್ರ ಕೊರೆತಕ್ಕೆ ಸಂಬಂಧಿಸಿದಂತೆ, ಸಮುದ್ರ ಕೊರೆತ ತಡೆಗಟ್ಟುವಿಕೆ ನಿರ್ವಹಣಾ ಸಮಿತಿಯನ್ನು ರಚಿಸುವುದರೊಂದಿಗೆ ಸಮಿತಿಯ ಅಧಿಕಾರಿಗಳು ಸಮುದ್ರ ಕೊರೆತ ಸಂಭವಿಸುವ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಡಿಸಿ ತಿಳಿಸಿದರು.

ಮಳೆಗಾಲದಲ್ಲಿ ಗುಡುಗು-ಸಿಡಿಲು ಸಂದರ್ಭದಲ್ಲಿ ಹವಾಮಾನ ಇಲಾಖೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ ಯಾವುದೇ ಮಾನವ ಹಾಗೂ ಪ್ರಾಣಿಗಳ ಜೀವ ಹಾನಿ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಹೊರರಾಜ್ಯದ ಕಾರ್ಮಿಕರು ಹೆಚ್ಚಾಗಿ ದುಡಿಯುತ್ತಿರುವುದರಿಂದ ಅವರ ಭಾಷೆಯಲ್ಲಿ ಗುಡುಗು-ಸಿಡಿಲಿನ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್‌ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.





































































































error: Content is protected !!
Scroll to Top