ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ – 2007

ಕರ್ನಾಟಕ ರಾಜ್ಯದೊಳಗಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಪರಿಣಾಮಕಾರಿಯಾದ ನಿಯಂತ್ರಣವನ್ನು ಹೊಂದುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು 2007ನೇ ಇಸವಿಗಿಂತ ಮುಂಚೆ ಚಾಲ್ತಿಯಲ್ಲಿದ್ದ ಕರ್ನಾಟಕ ಖಾಸಗಿ ನರ್ಸಿಂಗ್ ಹೋಂ ಅಧಿನಿಯಮ, 1976 ಎಂಬ ಹಳೆ ಕಾನೂನನ್ನು ರದ್ದುಗೊಳಿಸಿ ಅದರ ಬದಲಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಎಂಬ ಕಾನೂನನ್ನು ಜಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಡಬೇಕಾಗಿದ್ದು ಮಾತ್ರವಲ್ಲದೇ ಸರ್ಕಾರವು ಸೂಚಿಸುವ ಎಲ್ಲಾ ಅಗತ್ಯವಾಗಿರುವ ಅಂಶಗಳನ್ನು ಅಂದರೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಇರಬೇಕಾದ ಮಾನಕ ಗುಣಮಟ್ಟ, ವಿವಿಧ ವೈದ್ಯಕೀಯ ಚಿಕಿತ್ಸೆಗಳಿಗೆ ಮತ್ತು ಇತರ ಸೇವೆಗಳಿಗೆ ಸಂದಾಯ ಮಾಡಬೇಕಾದ ಚಾರ್ಜುಗಳ ಪಟ್ಟಿ, ಖಾಸಗಿ ವೈದ್ಯಕೀಯ ಸಂಸ್ಥೆಗಳು ನಿರ್ವಹಿಸಬೇಕಾದ ಶಾಸನಾತ್ಮಕ ಹೊಣೆಗಾರಿಕೆ, ಚಿಕಿತ್ಸಾ ದಾಖಲೆಗಳ ನಿರ್ವಹಣೆ, ಚಿಕಿತ್ಸೆ ಹೊಂದುವ ವ್ಯಕ್ತಿಗೆ ಸಂಬಂಧಿಸಿದ ನಿಗಾ, ಚಿಕಿತ್ಸೆ, ತಪಾಸಣೆ, ಸಲಹೆ ಹಾಗೂ ರೋಗ ನಿದಾನ ಅಭಿಪ್ರಾಯಗಳ ಸಾರಾಂಶದ ಪ್ರತಿಯನ್ನು ಆತನಿಗೆ ಅಥವಾ ಆತನ ಕುಟುಂಬದ ಸದಸ್ಯರಿಗೆ ಒದಗಿಸುವ ಬಗ್ಗೆ ಇತ್ಯಾದಿ ಜವಾಬ್ದಾರಿಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳು ಹೊಂದಿರುತ್ತದೆ.

ಸರ್ಕಾರವು ಸೂಚಿಸುವ ಶಾಸನಾತ್ಮಕ ಹೊಣೆಗಾರಿಕೆಯ ವಿರುದ್ಧ ವರ್ತಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಯನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಹಾಗೂ ಮೇಲ್ಕಾಣಿಸಿದ ಕಾನೂನಿನ ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗೆ ಸಂಬಂಧಪಟ್ಟವರ ವಿರುದ್ಧ ದಂಡ ವಿಧಿಸುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ದರಗಳ ಪ್ರದರ್ಶನದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಬಗ್ಗೆ, ಸರ್ಕಾರದ ಆರೋಗ್ಯ ಭರವಸೆ ಸ್ಕೀಮುಗಳ ಅಡಿಯಲ್ಲಿ ಚಿಕಿತ್ಸೆ ಮತ್ತು ಚಿಕಿತ್ಸಾ ವಿಧಾನಗಳಿಗಾಗಿ ಏಕರೂಪ ಪ್ಯಾಕೇಜು ದರಗಳನ್ನು ನಿಗದಿಪಡಿಸುವ ಬಗ್ಗೆ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಅನುಸೂಚಿಯಲ್ಲಿ ರೋಗಿಗಳ ಚಾರ್ಟರನ್ನು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಚಾರ್ಟರನ್ನು ನಿರ್ದಿಷ್ಟಪಡಿಸುವ ಬಗ್ಗೆ ರಾಜ್ಯ ಸರ್ಕಾರವು ಕಾನೂನಾತ್ಮಕ ಅಧಿಕಾರವನ್ನು ಹೊಂದಿರುತ್ತದೆ.

ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರ ನಿರ್ದಿಷ್ಟ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ರೋಗಿಗಳಿಂದ ಅಥವಾ ರೋಗಿಗಳ ಪ್ರತಿನಿಧಿಗಳಿಂದ ಮುಂಗಡ ಹಣ ಸಂದಾಯಕ್ಕೆ ಒತ್ತಾಯಿಸದೇ ಅಗತ್ಯವಿರುವ ತುರ್ತು ಚಿಕಿತ್ಸೆಯನ್ನು ಒದಗಿಸುವುದು ಮತ್ತು ಬಾಕಿ ಸಂದಾಯದ ಪಾವತಿ ಕುರಿತು ಒತ್ತಾಯಿಸದೇ ಮೃತ ರೋಗಿಯ ಪ್ರತಿನಿಧಿಗಳಿಗೆ ಮೃತನ ದೇಹವನ್ನು ಒಪ್ಪಿಸುವುದು ಇತ್ಯಾದಿ ಜವಾಬ್ದಾರಿಗಳನ್ನು ಹೊಂದಿರುತ್ತದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾನಕ ಗುಣಮಟ್ಟ ಮತ್ತು ವೈದ್ಯಕೀಯ ಚಿಕಿತ್ಸೆಯ ಕುಂದು ಕೊರತೆ ಇತ್ಯಾದಿಗಳ ಪರಿಶೀಲನೆ ಮತ್ತು ನಿಯಂತ್ರಣದ ಬಗ್ಗೆ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಸೂಕ್ತ ಅರ್ಹತೆಯನ್ನು ಹೊಂದಿರುವ ನಾಮ ನಿರ್ದೇಶಿತ ಸದಸ್ಯರನ್ನು ಒಳಗೊಂಡ ನೋಂದಣಿ ಮತ್ತು ಕುಂದು ಕೊರತೆ ನಿವರಣಾ ಪ್ರಾಧಿಕಾರವನ್ನು ರಚಿಸಿರುತ್ತದೆ. ಈ ಪ್ರಾಧಿಕಾರದ ಅಧ್ಯಕ್ಷರಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಸದಸ್ಯರುಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘ ಮತ್ತಿತರ ಸಂಘದ ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಾರೆ. ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯು, ತನ್ನ ಸಿಬ್ಬಂದಿಗಳ ಪಟ್ಟಿ ಮತ್ತು ಅವರ ವಿದ್ಯಾಹರ್ತೆಗಳು, ಶಸ್ತ್ರ ಚಿಕಿತ್ಸೆ ಕೊಠಡಿ, ಕಟ್ಟಡಗಳು, ಅವಶ್ಯಕ ಸ್ಥಳಾವಕಾಶ, ಸಲಕರಣೆಗಳು, ರೋಗಿಗಳಿಗೆ ಮತ್ತು ಅವರನ್ನು ನೋಡಿಕೊಳ್ಳುವವರಿಗೆ ಒದಗಿಸಬೇಕಾದ ಸೌಲಭ್ಯಗಳ ನಿರ್ವಹಣೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಗಳನ್ನು ತೋರಿಸುವ ಬಗ್ಗೆ ದಾಖಲೆಗಳನ್ನು ಇರಿಸಿ ವೈದ್ಯಕೀಯ ಸೇವೆಯ ಗುಣಮಟ್ಟಗಳನ್ನು ಕಾಪಾಡಿಕೊಂಡು ಬರಬೇಕಾಗುತ್ತದೆ.







































































































error: Content is protected !!
Scroll to Top