52 ಕ್ರಿಮಿನಲ್ ಪ್ರಕರಣ ವಾಪಸ್‌ಗೆ ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು : ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್ ಮೊಕದ್ದಮೆಗಳನ್ನು ಸಚಿವ ಸಂಪುಟ ಉಪ ಸಮಿತಿಯು ಫೆ.26ರಂದು ಮಾಡಿರುವ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಅಭಿಯೋಜನೆಯಿಂದ ಹಿಂಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು. ಇದೇ ವೇಳೆ ಕಾಂಗ್ರೆಸ್‌ ನಾಯಕರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್‌ ಪ್ರಕರಣಗಳನ್ನ ವಾಪಸ್‌ ಪಡೆಯುವ ಬಗ್ಗೆಯೂ ಚರ್ಚಿಸಲಾಯಿತು. ರೈತ ಸಂಘಟನೆ, ಧಾರ್ಮಿಕ ಸಂಘಟನೆಗಳ ಮೇಲಿನ ಕೇಸ್‌ ವಾಪಸ್‌ ಪಡೆಯುವ ‌ನಿರ್ಧಾರಗಳೂ ಇದರಲ್ಲಿ ಸೇರಿವೆ.

ಈ ಹಿಂದೆಯೂ ರಾಜ್ಯ ಸರ್ಕಾರ ರೈತರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಕಾರ್ಯಕರ್ತರ ವಿರುದ್ದದ ಪ್ರಕರಣವನ್ನು ವಾಪಸ್ ಪಡೆದುಕೊಂಡಿತ್ತು. ಇದರ ಪರ ಹಾಗೂ ವಿರುದ್ಧ ಚರ್ಚೆಗಳು ನಡೆದಿದ್ದವು. ಮತೀಯ ಸಂಘರ್ಷದಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ದ ದಾಖಲಾಗಿದ್ದ ಪ್ರಕರಣ ವಾಪಸ್ ಪಡೆದುಕೊಂಡಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿತ್ತು. ಆದರೆ ಇದೀಗ ಯಾವುದೆಲ್ಲಾ ಪ್ರಕರಣಗಳನ್ನು ರದ್ದು ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ರದ್ದು ಮಾಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಸಚಿವ ಸಂಪುಟ ತೀರ್ಮಾನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.











































































error: Content is protected !!
Scroll to Top