ರಾಜೀವ್ ಗಾಂಧಿ ಆಧುನಿಕ ಭಾರತದ ರೂವಾರಿ – ಶೇಖರ್ ಮಡಿವಾಳ್
ಕಾರ್ಕಳ : ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು ಆಧುನಿಕ ಭಾರತದ ರೂವಾರಿಯಾಗಿದ್ದರು. ಭಾರತ ಇಂದು ವಿಶ್ವದ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ಅವರ ಆಡಳಿತಾತ್ಮಕ ದೂರದೃಷ್ಟಿತ್ವವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ವಕೀಲ ಶೇಖರ್ ಮಡಿವಾಳ್ ಅಭಿಪ್ರಾಯಪಟ್ಟರು.
ಅವರು ಮೇ 21ರಂದು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತ ರತ್ನ ದಿ. ರಾಜೀವ್ ಗಾಂಧಿಯವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿಯನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಒಬ್ಬ ಪ್ರಧಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅದಿಕಾರವನ್ನು ಕೊಟ್ಟವರು ರಾಜೀವ್ ಗಾಂಧಿಯವರು. ಇದು ಪ್ರಜಾತಂತ್ರ ವ್ಯವಸ್ಥೆಯ ಮಹಾಕ್ರಾಂತಿಗೆ ನಾಂದಿ ಹಾಡಿತ್ತು ಎಂದು ಶೇಖರ್ ಮಡಿವಾಳ್ ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, 18 ವರ್ಷದ ಯುವ ವರ್ಗಕ್ಕೆ ಮತದಾನದ ಅಧಿಕಾರವನ್ನು ನೀಡಿ ಅವರು ದೇಶದ ರಾಜಕೀಯ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಎಂದಿಗೂ ಮಾದರಿ. ದೇಶದ ಅಖಂಡತೆ ಮತ್ತು ಸೈದಾಂತಿಕ ಬದ್ದತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ರಾಜೀವ್ ಗಾಂಧಿಯವರು ಹುತಾತ್ಮರಾದರು. ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿಯೂ ಅವರ ನೆನಪು ಅಚ್ಚಳಿಯದೆ ಉಳಿದಿದ್ದು, ಅವರ ಸಾಧನೆಯ ಮಾರ್ಗ ಚಿರಸ್ಮರಣೀಯ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ದೇವಾಡಿಗ, ಹಿರ್ಗಾನ ಸೊಸೈಟಿ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಭಾಕರ್ ಬಂಗೇರ, ಭೂನ್ಯಾಯ ಮಂಡಳಿ ಸದಸ್ಯ ಸುನಿಲ್ ಭಂಡಾರಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜಾ, ಆಶಾ ಬೈಲೂರ್, ಸಂತೋಷ ದೇವಾಡಿಗ ಬೋಳ, ದೀಪಕ್ ಶೆಟ್ಟಿ ದೊಂಡೆರಂಗಡಿ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ, ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕಾಸ್ಟಲಿನ್ ವಂದಿಸಿದರು.

































