ಬೆಂಗಳೂರು : ಭಾರೀ ಕುತೂಹಲ ಮೂಡಿಸಿರುವ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರ ಸಂಬಂಧ ಇಂದು ( ಮೇ 21) ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಮೇ 2ರಂದು ನಡೆದ ಮರು ಮತ ಎಣಿಕೆ ವೇಳೆ ಅಂಚೆ ಮತಪತ್ರ ತಿರುಚಲಾಗಿದೆ ಎಂದು ಆರೋಪಿಸಿ, ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮೇ 11ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮರು ಮತ ಎಣಿಕೆ ಪ್ರಕ್ರಿಯೆ ಮತ್ತು ಅದರಿಂದ ಬಂದ ಫಲಿತಾಂಶಕ್ಕೆ ಮಧ್ಯಂತರ ತಡೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಮರು ಎಣಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಇದರಿಂದಾಗಿ ರಾಜೇಗೌಡರ ಶಾಸಕತ್ವ ಊರ್ಜಿತಗೊಂಡಿತ್ತು.
ಮೇ 21ರಂದು, ಗುರುವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಅದರಂತೆ ನ್ಯಾ.ಸಂಜಯ್ ಕುಮಾರ್ ಮತ್ತು ನ್ಯಾ.ವಿನೋದ ಚಂದ್ರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಲಿದೆ.


































































