ಹೆಬ್ರಿ : ಅಸಮರ್ಪಕ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

ಹೆಬ್ರಿ : ಹೆಬ್ರಿ – ಕುಚ್ಚೂರು ಹಾಗೂ ಮಾಂಡಿ ಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಡಾಂಬರೀಕರಣ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಮೇ 18ರಂದು ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಕಾಮಗಾರಿಯನ್ನು ತಡೆದು ರಸ್ತೆ ಅಗಲೀಕರಣ ಮಾಡದಿದ್ದರೆ ಡಾಂಬರೀಕರಣವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರು ಮೊದಲೇ ಹೇಳಿದಂತೆ ಅಗಲೀಕರಣ ಮಾಡಿ ಡಾಂಬರೀಕರಣ ಮಾಡಬೇಕು. ಅದನ್ನು ಬಿಟ್ಟು ಹಳೆಯ ರಸ್ತೆಯ ಮೇಲೆಯೇ ಡಾಂಬರೀಕರಣ ಮಾಡುವುದಾದರೆ ಡಾಂಬರೀಕರಣ ಬೇಡ ಎಂದು ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಹೆಬ್ರಿ ಪೊಲೀಸ್ ಠಾಣಾಧಿಕಾರಿ ರವಿ ಬಿ.ಕೆ., ಪಿಡಬ್ಲ್ಯೂಡಿ ಇಂಜಿನಿಯರ್ ತ್ರಿನೇಂದ್ರ, ಗುತ್ತಿಗೆದಾರ ವಾದಿರಾಜ ಶೆಟ್ಟಿ ಅವರು ಆಕ್ರೋಶಗೊಂಡ ಗ್ರಾಮಸ್ಥರನ್ನು ಮನವೊಲಿಸಿ ಅರಣ್ಯ ಇಲಾಖೆಯವರ ಸಮಸ್ಯೆಯಿಂದ ರಸ್ತೆ ಅಗಲೀಕರಣಕ್ಕೆ ವಿಳಂಬವಾಗಿದೆ. ಅರಣ್ಯ ಇಲಾಖೆಯ ಎಫ್‌ಸಿ ಸಿಕ್ಕಿದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದ ಅವರು ಮಳೆಗಾಲ ಕಳೆದ ನಂತರ ಡಿಸೆಂಬರಲ್ಲಿ ರಸ್ತೆಯ ಅಗಲೀಕರಣದೊಂದಿಗೆ ಮರು ಡಾಂಬರೀಕರಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕರ ಭೇಟಿ
ಮೇ 19ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರಸ್ತೆ ಅಗಲೀಕರಣವಾಗಲಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಸೇರಿದಂತೆ ಸ್ಥಳೀಯರು ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿದರು.

















































error: Content is protected !!
Scroll to Top