ಉಡುಪಿ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಆರ್ಥಿಕ ವರ್ಷ 2013-14 ರಿಂದ 2018-19 ನೇ ಸಾಲಿನಲ್ಲಿ ಅರಿವು, ಶ್ರಮಶಕ್ತಿ, ಸ್ವಾವಲಂಬನಾ, ಎನ್.ಎಂ.ಎಫ್.ಡಿ.ಸಿ ನೇರ ಸಾಲ, ಮೈಕ್ರೋ ಕಿರುಸಾಲ, ಪಶುಸಂಗೋಪನಾ ಯೋಜನೆ ಮುಂತಾದ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲದ ಮೊತ್ತವನ್ನು ಪೂರ್ಣವಾಗಿ ಅಸಲು ಪಾವತಿಸುವ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಒಂದಾವರ್ತಿ ತೀರುವಳಿ ಯೋಜನೆ (ಒ.ಟಿ.ಎಸ್) ಮೂಲಕ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.
ಈ ಯೋಜನೆಯಡಿ ಫಲಾನುಭವಿಯು ಸಾಲದ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತದ ಶೇ. 25ರಷ್ಟು ಮೊತ್ತವನ್ನು ಪಾವತಿಸಿ, ಯೋಜನೆಯಡಿ ನೋಂದಾಯಿಸಿಕೊಂಡು 2026 ರ ಮೇ 1 ರಿಂದ ಜುಲೈ 31 ರವರೆಗೆ ಬಾಕಿ ಉಳಿದ ಪೂರ್ಣ ಮೊತ್ತವನ್ನು ಪಾವತಿಸಿ ಸರಕಾರದ ಒಟಿಎಸ್ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ನಿಗದಿತ ಸಮಯದಲ್ಲಿ ಸಾಲವನ್ನು ಪಾವತಿಸದಿದ್ದಲ್ಲಿ ನಿಗಮದ ನಿಯಮಾವಳಿಯಂತೆ ಮರುಪಾವತಿಸಿದ ಮೊತ್ತವನ್ನು ಸಾಲದ ಖಾತೆಗೆ ಸರಿಹೊಂದಿಸಲಾಗುವುದು. ಒ.ಟಿ.ಎಸ್ ಬಡ್ಡಿಯನ್ನು ಮನ್ನಾ ಯೋಜನೆ ಅಪೇಕ್ಷಿಸುವ ಫಲಾನುಭವಿಗಳು ನಿಗಮದ ವೆಬ್‌ಸೈಟ್ ಮೂಲಕ ಅಥವಾ ಮಣಿಪಾಲದಲ್ಲಿರುವ ನಿಗಮದ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

























