ಕಾರ್ಕಳ : ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನ, ತಾಳಮದ್ದಳೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಸಾಧಕ ಕಲಾವಿದರನ್ನು ಗೌರವಿಸುವ ಕೆಲಸವನ್ನು ಕುಂದೇಶ್ವರ ದೇವಸ್ಥಾನ ವಾರ್ಷಿಕ ಉತ್ಸವ ಸಂದರ್ಭ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಜ. 23ರಂದು ಹಿರ್ಗಾನ ಗ್ರಾಮದ ಕುಂದೇಶ್ವರ ಉತ್ಸವದಲ್ಲಿ ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಮತ್ತು
ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಿ ಬಳಿಕ ಮಾತನಾಡಿದರು.
ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಕ್ಷೇತ್ರದ ಭಕ್ತನಾಗಿ ಕುಂದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ. ಉತ್ಸವ ಸಂದರ್ಭ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳು ಕುಂದೇಶ್ವರದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಕುಂದೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಸರ್ವರ ಪ್ರಯತ್ನ ಅವಶ್ಯವೆಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾವ್ಯಶ್ರೀ ಅಜೇರು, ಇಂತಹ ಶ್ರೇಷ್ಠ ಸಮ್ಮಾನದ ಗೌರವಕ್ಕೆ ಪಾತ್ರರಾಗಿರುವುದು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಯಕ್ಷಗಾನದಲ್ಲಿ ಪ್ರಾಂಜಲ ಮನಸ್ಸಿನಿಂದ ಕಲಾ ಸೇವೆಯನ್ನು ಮುಂದುವರಿಸುತ್ತೇನೆ ಎಂದರು. ಉಮೇಶ್ ಮಿಜಾರು ಮಾತನಾಡಿ, ಪುಣ್ಯಕ್ಷೇತ್ರಗಳಲ್ಲಿ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ಗೌರವ ನೀಡುವುದರಿಂದ ರಂಗಕಲೆಗಳಿಗೆ ಉತ್ತೇಜನ ಲಭಿಸುತ್ತದೆ ಎಂದರು.
ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಧರ್ಮದರ್ಶಿಗಳಾದ ಗಂಗಾ ಆರ್. ಭಟ್, ಪ್ರಧಾನ ಅರ್ಚಕರಾದ ಕೃಷ್ಣ ರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್, ಉದ್ಯಮಿ ಸತೀಶ್ ಭಟ್ ಕುಂದೇಶ್ವರ, ಸಿರಿಯಣ್ಣ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ಅರ್ಚಕರಾದ ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ
ಇದೇ ಸಂದರ್ಭ ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಹಾಗೂ ದೇಗುಲ ದ್ವಾರಕ್ಕೆ ಹಿತ್ತಾಳೆ ಹೊದಿಕೆ ಸಮರ್ಪಿಸಿದ ರಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಗಿಣಿ ಉಪೇಂದ್ರ ರಾವ್ ಪ್ರಾರ್ಥಿಸಿದರು.

ಸಾಂಸ್ಕೃತಿಕ ವೈವಿಧ್ಯ
ಕಾವ್ಯಶ್ರೀ ಅಜೇರು ಮತ್ತು ಲಕ್ಷ್ಮಿ ನಾರಾಯಣ ಹೊಳ್ಳ ದ್ವಂದ್ವ ಭಾಗವತಿಕೆಯಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ ತಾಳಮದ್ದಳೆ ನಡೆಯಿತು. ತಾಳಮದ್ದಳೇ ನಿರ್ದೇಶನ ಮಾಡಿದ ರಾಮಚಂದ್ರ ಭಟ್ ಎಲ್ಲೂರು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಛಾಯಾ ಗ್ರಾಹಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ನ್ಯೂಸ್ ಕಾರ್ಕಳ ಸಂಪಾದಕ ರಾಮಚಂದ್ರ ಬರೆಪ್ಪಾಡಿ ಸನ್ಮಾನಿಸಿದರು. ರಂಜಿನಿ ಲಕ್ಷ್ಮೀನಾರಾಯಣ ಅವರು “ದಾಕ್ಷಾಯಿಣಿ” ಏಕಪಾತ್ರಾಭಿನಯ ಪ್ರದರ್ಶಿಸಿದರು. ನಮ್ಮ ಬೆದ್ರ ಕಲಾವಿದರಿಂದ ವೈರಲ್ ವೈಶಾಲಿ ತುಳು ನಾಟಕ ಜನ ಮೆಚ್ಚುಗೆಗೆ ಪಾತ್ರವಾಯಿತು.










































