ಉಡುಪಿ : ಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ಕೊಡಮಾಡುವ ʼಕೀರ್ತಿ ಕಲಶʼ ಗೌರವಕ್ಕೆ ಈ ಬಾರಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಮುಂಬೈ ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್ ಭಾಜನರಾಗಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಅಭಿಮತ ಸಂಭ್ರಮ ಸಂದರ್ಭ ʼಕೀರ್ತಿ ಕಲಶʼ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಫೆ. 14ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿಮತ ಸಂಭ್ರಮದಲ್ಲಿ ದಯಾ ನಾಯಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರ, ಸಮಾರಂಭದಿಂದ ದೂರವೇ ಉಳಿದಿದ್ದ ದಯಾ ನಾಯಕ್ ಅವರು ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ. ಸಾವಿರಾರು ಮಂದಿ ಸಭಿಕರ ಸಮ್ಮುಖದಲ್ಲಿ ಬೃಹತ್ ವೇದಿಕೆಯಲ್ಲಿ ದಯಾನಾಯಕ್ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವುದು ಕರಾವಳಿಯ ದಯಾ ನಾಯಕ್ ಅಭಿಮಾನಿಗಳಿಗೆ ಬಹಳ ದೊಡ್ಡ ಸಂಭ್ರಮವಾಗಲಿದೆ.
ಯಶೋಗಾಥೆ
ವೃತ್ತಿಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಮಾಜ ಗುರುತಿಸುವ ಸಾಧನೆ ಮೆರೆದ ಮೂವರು ಸಾಧಕರಿಗೆ ಪ್ರತಿ ವರ್ಷ “ಯಶೋಗಾಥೆ” ಪುರಸ್ಕಾರವನ್ನು ನೀಡುತ್ತಿದ್ದು ಈ ಬಾರಿ ತುಳು ಜಾನಪದದ ಹಿರಿಯ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಲಾಸೇವೆಗೈಯುತ್ತಿರುವ ಯಶಸ್ವಿ ಕಲಾವೃಂದ ಹಾಗೂ ಬನ್ನೂರಿನ ಹಿರಿಯ ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಗುಂಡಿಗೋಳಿ ನೀಡಲಾಗುತ್ತಿದೆ ಎಂದು ಗಿಳಿಯಾರ್ ತಿಳಿಸಿದ್ದಾರೆ.









































