ಕುಮ್ಕಿ ಹಕ್ಕು

ಕುಮ್ಕಿ ಹಕ್ಕು ಎಂದರೆ ಕದೀಂ ವರ್ಗ ಜಮೀನನ್ನು ಹೊಂದಿರುವ ಕದೀಂ ವರ್ಗದಾರನು ತನ್ನ ಕದೀಂ ವರ್ಗ ಜಮೀನಿಗೆ ಹೊಂದಿರುವ ಸರಕಾರದ ಮಾಲೀಕತ್ವದ ಜಮೀನಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸೊಪ್ಪು, ಕಟ್ಟಿಗೆ ಇತ್ಯಾದಿಗಳನ್ನು ಕೃಷಿ ಭೂಮಿಯ ಸಾಗುವಳಿಯ ಉದ್ದೇಶಕ್ಕೆ ಉಪಯೋಗಿಸುವ ಒಂದು ವಿಶೇಷವಾದ ಹಕ್ಕು ಮತ್ತು ಸೌಲಭ್ಯವಾಗಿರುತ್ತದೆ. ಮೂಲತಃ ‘ಸೌತ್ ಕೆನರಾ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು (ಪ್ರತ್ಯೇಕಿಸಲ್ಪಟ್ಟ ಉಡುಪಿ ಜಿಲ್ಲೆ ಸಮೇತ) ಮಹಾರಾಷ್ಟçದ ಮುಂಬೈ ಪ್ರಾಂತ್ಯಕ್ಕೆ ಸೇರಿದ ಪ್ರದೇಶವಾಗಿತ್ತು. ಕಾಲ ಕ್ರಮೇಣ ಬ್ರಿಟಿಷ್ ಆಡಳಿತವು ಭಾರತದಲ್ಲಿ ತನ್ನ ಆಡಳಿತ ಸುಧಾರಣೆಯ ದೃಷ್ಟಿಯಿಂದ ‘ಸೌತ್ ಕೆನರಾ’ ಜಿಲ್ಲೆಯನ್ನು ಮದರಾಸು ರಾಜ್ಯದ (ಈಗಿನ ತಮಿಳುನಾಡು) ಆಡಳಿತ ವ್ಯಾಪ್ತಿಗೆ ಒಳಪಡಿಸಿದ್ದರು. ಆ ಸಮಯದಲ್ಲಿ ಈಗ ಕೇರಳ ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿರುವ ಕಾಸರಗೋಡು ಜಿಲ್ಲೆಯು ಸಹಾ ನಮ್ಮ ‘ಸೌತ್ ಕೆನರಾ’ ಜಿಲ್ಲೆಯ ಆಡಳಿತ ವ್ಯಾಪ್ತಿಯೊಳಗೆ ಇತ್ತು. 1-11-1956 ರಿಂದ ‘ಸೌತ್ ಕೆನರಾ’ ಜಿಲ್ಲೆಯನ್ನು ಹಿಂದೆ ಮೈಸೂರು ಎಂದು ಕರೆಯಲ್ಪಡುತ್ತಿದ್ದ ನಮ್ಮ ಈಗಿನ ಕರ್ನಾಟಕ ರಾಜ್ಯದ ಆಡಳಿತ ವ್ಯಾಪ್ತಿಯೊಳಗೆ ಸೇರಿಸಲ್ಪಟ್ವಿರುತ್ತದೆ. ಈ ಹಿಂದೆ ಸೌತ್ ಕೆನರಾ ಜಿಲ್ಲೆಯು ಮದರಾಸು ರಾಜ್ಯದ ಆಡಳಿತ ವ್ಯಾಪ್ತಿಯೊಳಗೆ ಬರುತ್ತಿದ್ದ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಸರಕಾರದವರು ರೈತರು ಪರಿಣಾಮಕಾರಿಯಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ರೈತರಿಗೆ ಕುಮ್ಕಿ ಹಕ್ಕಿನ ಕುರಿತು ‘ಮದ್ರಾಸ್ ರೆವೆನ್ಯೂ ಬೋರ್ಡ್ ಸ್ಟ್ಯಾಂಡಿಂಗ್‌ ಆಡರ್ಸ್‌’ ಎಂಬ ವಿಶೇಷವಾದ ಆದೇಶವನ್ನು ಜ್ಯಾರಿಗೆ ತಂದಿದ್ದು ಈ ಆದೇಶವು ಕೃಷಿಕರಿಗೆ ತಮ್ಮ ಕದೀಂ ವರ್ಗ ಹಕ್ಕಿನ ಸ್ಥಳದ ಕೃಷಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ವರಪ್ರಧಾನವಾಗಿರುತ್ತದೆ. ಬಹಳ ಹಳೇಯದಾದ ಈ ಆದೇಶವು ಈಗಲೂ ಸಹಾ ಊರ್ಜಿತದಲ್ಲಿರುತ್ತದೆ.

ಈ ಆದೇಶದ ಪ್ರಕಾರ ಪ್ರತಿಯೊಬ್ಬ ಕೃಷಿಕ ತಾನು ಮಾಲಿಕತ್ವದ ನೆಲೆಯಲ್ಲಿ ಸ್ವಾಧೀನ ಹೊಂದಿರುವ ತನ್ನ ಕದೀಂ ವರ್ಗ ಜಮೀನಿನ ಸುತ್ತಲೂ ಇರುವ ಸರಕಾರಿ ಭೂಮಿಯಲ್ಲಿ ಕದೀಂ ವರ್ಗ ಜಮೀನಿನಿಂದ 450 ಲಿಂಕ್ಸ್ ಅಂದರೆ 100 ಯಾರ್ಡ್ಸ್ ವ್ಯಾಪ್ತಿಯಲ್ಲಿ ತನ್ನ ಕುಮ್ಕಿ ಹಕ್ಕನ್ನು ತನ್ನ ಕೃಷಿ ಚಟುವಟಿಕೆಗೋಸ್ಕರ ಕಾನೂನು ಬದ್ಧವಾಗಿ ಚಲಾಯಿಸುವ ಅಧಿಕಾರವನ್ನು ಹೊಂದಿರುತ್ತಾನೆ. ಕುಮ್ಕಿ ಎಂಬುವುದು ಸರಕಾರಿ ಜಮೀನಿನ ಮೇಲೆ ಕದೀಂ ವರ್ಗ ಭೂಮಿಯ ಮಾಲಿಕರು ಹೊಂದಿರುವ ವಿಶೇಷವಾದ ಸವಲತ್ತು ಆಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಕದೀಂ ವರ್ಗ ಸ್ಥಳಕ್ಕೆ ಸಮ್ಮಂದಪಟ್ಟ ಆರ್.ಟಿ.ಸಿ. ಕಲಂ ನಂಬ್ರ 6 ರಲ್ಲಿ ‘ಕದೀಂ’ ಎಂಬುದಾಗಿ ನಮೂದು ಮಾಡಬೇಕಾದ ಜವಾಬ್ದಾರಿ ಸರಕಾರದ ಕಂದಾಯ ಇಲಾಖೆಯದ್ದಾಗಿರುತ್ತದೆ. ಕುಮ್ಕಿ ಭೂಮಿಯು ಸರಕಾರಕ್ಕೆ ಸೇರಿದ ಭೂಮಿಯಾಗಿದ್ದು ಸದರಿ ಕುಮ್ಕಿ ಭೂಮಿಯ ಮೇಲಿನ ಹಕ್ಕನ್ನು ಹೊಂದಿರುವ ಯಾವುದೇ ಕೃಷಿಕ ಸದರಿ ಕುಮ್ಕಿ ಭೂಮಿಯಲ್ಲಿರುವ ತರಗೆಲೆ, ಸೊಪ್ಪು, ಕಟ್ಟಿಗೆ ಇತ್ಯಾದಿಗಳನ್ನು ತನ್ನ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಾನೆ. ಕದೀಂ ವರ್ಗದಾರನ ಈ ರೀತಿಯ ಹಕ್ಕಿಗೆ ಯಾರು ಕೂಡಾ ಯಾವುದೇ ರೀತಿಯ ಅಡ್ಡಿ ಆತಂಕ ಪಡಿಸುವ ಅಧಿಕಾರ ಹೊಂದಿರುವುದಿಲ್ಲ. ಈ ಬಗ್ಗೆ ಈತ ತನ್ನ ಕುಮ್ಕಿ ಹಕ್ಕಿನ ರಕ್ಷಣೆಗೆ ಕಾನೂನಿನ ನೆರವನ್ನು ಪಡೆಯಬಹುದಾಗಿದೆ. ಆದರೆ ಸರಕಾರವು ಯಾವುದೇ ಕದೀಂ ವರ್ಗದಾರ ಕುಮ್ಕಿ ಹಕ್ಕನ್ನು ಕಾನೂನು ಬದ್ಧವಾಗಿ ರದ್ದುಪಡಿಸಿ ತನ್ನ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳವ ಅಧಿಕಾರವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಜಿಲ್ಲಾಧಿಕಾರಿಯವರು ಕುಮ್ಕಿ ಜಮೀನಿಗೆ ಸಂಬಂಧಪಟ್ಟ ಕದೀಂ ವರ್ಗದಾರನಿಗೆ ಸೂಕ್ತ ಅವಕಾಶ ನೀಡಿ ತನಿಕೆ ನಡೆಸಿ ಸೂಕ್ತ ಆದೇಶ ಮಾಡಬೇಕಾಗಿರುತ್ತದೆ. ಅಲ್ಲಿಯ ತನಕ ಕದೀಂ ವರ್ಗ ಸ್ಥಳದ ಮಾಲಿಕನ ಕುಮ್ಕಿ ಹಕ್ಕಿಗೆ ಯಾವುದೇ ರೀತಿಯ ಅಡ್ಡಿ ಆತಂಕ ಉಂಟುಮಾಡುವ ಅಧಿಕಾರ ಸರಕಾರಕ್ಕಾಗಲಿ ಅಥವಾ ಕಂದಾಯ ಇಲಾಖೆಯ ಯಾವುದೇ ಸರಕಾರಿ ಅಧಿಕಾರಿಗಾಗಲೀ ಇರುವುದಿಲ್ಲ.

ಕುಮ್ಕಿ ಹಕ್ಕನ್ನು ಹೊಂದಿರುವ ಯಾವುದೇ ವ್ಯಕ್ತಿ ತನ್ನ ಕುಮ್ಕಿ ಹಕ್ಕನ್ನು ಅಥವಾ ತಾನು ಸ್ವಾಧೀನ ಹೊಂದಿರುವ ಕುಮ್ಕಿ ಸ್ಥಳವನ್ನು ಇತರರಿಗೆ ಮಾರುವಂತಿಲ್ಲ. ಕುಮ್ಕಿ ಜಮೀನನ್ನು ಸಂಬಂಧಪಟ್ಟ ಕದೀಂ ವರ್ಗದ ರೈತರಿಗೆ ನೀಡುವ ಕುರಿತು ದಿನಾಂಕ 08-02-2013 ರಂದು ನಂ.ಆರ್.ಡಿ.46 ಎಲ್.ಜಿ.ಪಿ 2012 (ಪಿ-1)ರಂತೆ ಅಂದಿನ ಕರ್ನಾಟಕ ಸರಕಾರ ತನ್ನ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿ ನಂತರ ತನ್ನ ಸಂಪುಟ ಸಭೆಯಲ್ಲಿಯೂ ಮಂಜೂರಾತಿಗಾಗಿ ತೀರ್ಮಾನ ತೆಗೆದುಕೊಂಡು ಕಾನೂನು ಇಲಾಖೆಯ ಅನುಮೋದನೆಯನ್ನು ಪಡೆಯಲಾಗಿತ್ತು. ಕುಮ್ಕಿ ಜಮೀನನ್ನು ಸಂಬಂಧಪಟ್ಟ ಕದೀಂ ವರ್ಗ ಹಕ್ಕಿನ ರೈತರಿಗೆ ನೀಡುವರೇ ಸೂಕ್ತ ಪರಿಣಾಮಕಾರಿ ಕಾನೂನನ್ನು ಅನುಷ್ಠಾನಕ್ಕೆ ತಂದು ಸಮ್ಮಂದಪಟ್ಟ ಕದೀಂ ವರ್ಗದಾರ ರೈತರಿಗೆ ಕುಮ್ಕಿ ಜಮೀನಿನ ಮೇಲಿನ ಹಕ್ಕನ್ನು ನೀಡುವ ಅವಶ್ಯಕತೆ ಕೃಷಿಕರ ಹಿತ ದೃಷ್ಟಿಯಿಂದ ನ್ಯಾಯೋಚಿತವಾಗಿರುತ್ತದೆ.









































































































error: Content is protected !!
Scroll to Top