ಪರಿಹಾರ ಮೊತ್ತ ತ್ವರಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಸುನಿಲ್ ಕುಮಾರ್ ತಾಕೀತು
ಕಾರ್ಕಳ : ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಅಗಲೀಕರಣ ಹಿನ್ನೆಲೆ ಬಜಗೋಳಿ – ಮಾಳ ರಸ್ತೆ ಬದಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ತಾ.ಪಂ. ಕಚೇರಿಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಅ. 7ರಂದು ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶ್ಯಾಮ್ ಶೆಟ್ಟಿ ನಲ್ಲೂರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮನೆಗೆ ಪರಿಹಾರ ಮೊತ್ತ ಪೂರ್ತಿ ನೀಡದೇ ಎಬ್ಬಿಸಲು ಮುಂದಾಗಿದೆ. 12 ಸೆಂಟ್ಸ್‌ವರೆಗೆ ಕನ್ವರ್ಶನ್ ಆದ ಮೊತ್ತ ಪರಿಹಾರ ನೀಡಬೇಕೆಂಬ ಕಾನೂನು ಕೂಡ ಪಾಲನೆ ಮಾಡುತ್ತಿಲ್ಲ. ರಸ್ತೆ ಅಗಲೀಕರಣಕ್ಕೆ ನಾವು ಜಾಗ ನೀಡಲು ಬದ್ಧರಿದ್ಧೇವೆ. ಆದರೆ, ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಪದ್ಮನಾಭ ನಾಯ್ಕ್ ಮಾತನಾಡಿ, ಮನೆ ಪರಿಹಾರ ಮೊತ್ತ ನೀಡುವಾಗ 34 % ಸವಕಳಿ ಹಣ ಕಡಿತ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು. ಸಾಣೂರಿನಲ್ಲಿ ಸೆಂಟ್ಸ್‌ಗೆ 1.20 ಲಕ್ಷ ರೂ. ಪರಿಹಾರ ಮೊತ್ತ ನೀಡಿದ್ದರೆ, ಮಾಳ ಮುಡಾರು ಭಾಗದಲ್ಲಿ ಕೇವಲ 68 ಸಾವಿರ ರೂ. ನಿಗದಿಗೊಳಿಸಲಾಗಿದೆ ಎಂದು ಗ್ರಾಮಸ್ಥರೋರ್ವರು ಅಸಮಾಧಾನ ವ್ಯಕ್ತಪಡಿಸಿದರು.
ಸುನಿಲ್ ತಾಕೀತು
ಭೂಸ್ವಾಧೀನಕ್ಕೊಳಪಡುವ ಜಾಗ ಮಾತ್ರವಲ್ಲದೇ ರೈತನಲ್ಲಿರುವ ಇಡೀ ಜಾಗವನ್ನೇ ಭೂಸ್ವಾಧೀನ ಎಂದು ಆರ್‌ಟಿಸಿಯಲ್ಲಿ ನಮೂದು ಮಾಡಲಾಗಿದೆ. ಅದರನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ವಿ. ಸುನಿಲ್ ಕುಮಾರ್, ಪರಿಹಾರ ಮೊತ್ತ ನೀಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಮನೆ ಹಾಗೂ ಭೂ ಸ್ವಾಧೀನ ಪರಿಹಾರ ತ್ವರಿತವಾಗಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ, ತಹಶೀಲ್ದಾರ್ ಪ್ರದೀಪ್ ಆರ್., ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಂಜುನಾಥ್ ನಾಯಕ್, ಕಂದಾಯ, ಮೆಸ್ಕಾಂ, ಲೋಕೋಪಯೋಗಿ ಇಲಾಖಾಧಿಕಾರಿಗಳು, ಮಾಳ, ಮುಡಾರು ಪಂಚಾಯತ್ ಪಿಡಿಒ, ಗ್ರಾಮ ಆಡಳಿತಾಧಿಕಾರಿ, ಗ್ರಾಮಸ್ಥರು ಉಪಸ್ಥಿತದ್ದರು.























