ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಸಹಕಾರಿ – ಸಂತೋಷ್ ನೆಲ್ಲಿಕಾರು
ಕಾರ್ಕಳ : ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಪ್ರಜ್ಞೆಯನ್ನು ಬೆಳೆಸಿಕೊಂಡು ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿ, ತನ್ನ ವ್ಯಕ್ತಿತ್ವದ ವಿಕಸನದೊಂದಿಗೆ ಜೀವನವನ್ನು ಪ್ರಕಾಶಗೊಳಿಸುವ ಮೌಲ್ಯಯುತ ಯೋಜನೆ ರಾಷ್ಟ್ರೀಯ ಸೇವಾ ಯೋಜನೆ ಎಂದು ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಹೇಳಿದರು.
ಅವರು ಮಡಿಬೆಟ್ಟು ಅನುದಾನಿತ ಹಿ. ಪ್ರಾ. ಶಾಲೆ ಕಣಜಾರು ಇಲ್ಲಿ ನಡೆಯುತ್ತಿರುವ ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ರಾ.ಸೇ.ಯೋ.ಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯನಿರ್ವಹಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಮಾತನಾಡಿ, ಈ ಶಿಬಿರದಲ್ಲಿ ಕಳೆದ ಅನುಭವಗಳು ಜೀವಮಾನವಿಡಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ವಿಕ್ರಂ ಹೆಗ್ಡೆ ಮಾತನಾಡಿ, ಶಿಬಿರದ ಮೂಲಕ ಮೌಲ್ಯಯುತ ಜೀವನಕ್ಕೆ ದಾರಿ ಮಾಡಿಕೊಡುವಂತಹ ಅವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ. ಇದರ ಸದುಪಯೋಗವನ್ನು ಶಿಬಿರಾರ್ಥಿ ಪಡೆದುಕೊಂಡಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.

ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು ಧ್ವಜಾರೋಹಣವನ್ನು ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಿ.ಎ. ಚಂದನ್ ಹೆಗ್ಡೆ, ಶ್ರೀ ಬ್ರಹ್ಮ ಲಿಂಗೇಶ್ವರ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಕೆಂಜೂರು ಶಶಿಧರ್ ಶೆಟ್ಟಿ, ಉದ್ಯಮಿಗಳಾ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲ ರವಿ ಜಿ., ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶೈಲೇಶ್ ಶೆಟ್ಟಿ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಶ್ವತ್ಥ್ ಭಾರದ್ವಾಜ್ ಕೆ. ವಂದಿಸಿದರು.
































































