ಕಾಂಗ್ರೆಸ್ನ ಕಂಪನ, ಕ್ರಾಂತಿಯಿಂದ ಜನರಿಗೆ ತೊಂದರೆಯಾಗದಿರಲಿ – ಸುನಿಲ್ ಕುಮಾರ್
ಉಡುಪಿ : ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಇನ್ನು ಮುಂದೆ ಮೂಡುಬಿದಿರೆಯನ್ನು ಟಾರ್ಗೆಟ್ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇಂಗಿತ ವ್ಯಕ್ತಪಡಿಸಿದರು.
ಅವರು ಅ. 3ರಂದು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಕಾರ್ಯಕರ್ತರ ಸಮಾರಂಭದಲ್ಲಿ ಮಾತನಾಡಿದರು. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶ ಆಶ್ರಮ, ಶನಿ ಶಿಂಗ್ನಾಪುರದಲ್ಲೂ ರಕ್ತದ ರುಚಿ ನೋಡಿದ್ದ ಅವರು ಧರ್ಮಸ್ಥಳದಲ್ಲೂ ಅದೇ ಕೆಲಸ ಮಾಡಲು ಮುಂದಾದರು. ಅಪಪ್ರಚಾರ ನಡೆಸಿದವರಿಗೆ ತಕ್ಕ ಶಾಸ್ತಿಯಾಗಬೇಕು. ಈ ಸಂಕಲ್ಪವನ್ನ ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು. ಏಕೆಂದರೆ ಇದು ವ್ಯಕ್ತಿ ಅಥವಾ ಸಂಸ್ಥೆಗೆ ನಡೆದ ಆಕ್ರಮಣ ಅಲ್ಲ. ಬದಲಾಗಿ ನಮ್ಮ ಶ್ರದ್ದೆ, ನಂಬಿಕೆ, ವಿಷಯದ ಮೇಲೆ ಮಾಡಿರುವ ಆಕ್ರಮಣ ಎಂದವರು ಹೇಳಿದರು.
ಉತ್ತರ ಕೊಡುತ್ತೇವೆ
ಹಿಂದುಗಳ ಶ್ರದ್ದೆಯ ವಿಚಾರ ಮತ್ತು ಕೇಂದ್ರದ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳು ಇವರ ಟಾರ್ಗೆಟ್. ಕುಂಭಮೇಳದ ಮೇಲೆ ಅಪಪ್ರಚಾರ ನಡೆಯಿತು. ಆರೋಪ ಬಂದ ಮೇಲೆ ಅಲ್ಲಿಗೆ ಹೋಗುವ ಸಂಖ್ಯೆ ಜಾಸ್ತಿ ಆಯ್ತು. ನಾವು ಸವಾಲನ್ನು ಎದುರಿಸಲು ಸಶಕ್ತರಾಗಿದ್ದೇವೆ ಎಂದ ಅವರು ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಂದಿನ ಎರಡೂವರೆ ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಅನ್ನೋ ಮಾತು ಹೇಳಿದ್ದಾರೆ. ಈ ಮಾತಿನಿಂದ ನನಗೆ ಆಪ್ತರಾಗಿರುವ ಡಿ. ಕೆ. ಶಿವಕುಮಾರ್ ಅವರ ಬಗ್ಗೆ ಅನುಕಂಪ ಬರುತ್ತಿದೆ. ಅವರು ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದಿರುವ ಮಾತು ನೆನಪಿದೆ ಎಂದರು.
ಡಿಕೆಶಿ ಸಹಜವಾಗಿ ಅಧಿಕಾರ ಪಡೆಯುತ್ತಾರೋ ? ಅಥವಾ ಅವರ ಸಹಜ ಗುಣ ಕಾಲಿನಿಂದ ಒದ್ದು ಪಡೆಯುತ್ತಾರೋ ನಿರೀಕ್ಷೆ ಮಾಡುತ್ತಿದ್ದೇವೆ. ಆದರೆ, ಈ ಕ್ರಾಂತಿ, ಈ ಕಂಪನ ಕಾಂಗ್ರೆಸ್‌ನೊಳಗೆ ಆಗಲಿ, ಹೊರತು ರಾಜ್ಯದ ಜನತೆಗೆ ಇದರಿಂದ ತೊಂದರೆ ಆಗದಿರಲಿ. ಈ ಸರಕಾರ ಶೀಘ್ರವಾಗಿ ಪತನವಾಗಿ ಮುಂದಿನ ಚುನಾವಣೆಯಾಗಬೇಕು. ನಾವೇ ಪುಷ್ಪಾರ್ಚನೆ ಮಾಡಬೇಕು ಅನ್ನುವ ನಿರೀಕ್ಷೆ ಇಟ್ಟುಕೊಂಡಿದ್ದು, ಬಿಜೆಪಿ ಚುನಾವಣೆಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಸಾವಿಲ್ಲದ ಮನೆಯಿಂದ ಸಾಸಿವೆ ತಾ ಅನ್ನುವ ಮಾತಿದೆ. ಈ ಮಾತಿಗನುಗುಣವಾಗಿ ಇವತ್ತು ರಾಜ್ಯದಲ್ಲಿ ಗುಂಡಿ ಇಲ್ಲದ ರಸ್ತೆಗಳಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. 80% ಪರ್ಸೆಂಟ್ ಸರ್ಕಾರವೇ ಇದಕ್ಕೆ ಕಾರಣ. ಹೊಸ ರಸ್ತೆ ನಿರ್ಮಾಣ ಕನಸಿನ ಮಾತು. ನಾವು ಹೊಸ ರಸ್ತೆ ನಿರ್ಮಾಣಕ್ಕೆ ಅನುದಾನ ಕೇಳುತ್ತಲೆ ಇಲ್ಲ. ಏಕೆಂದರೆ ಇರುವ ರಸ್ತೆಗಳ ಗುಂಡಿ ಮುಚ್ಚಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸುನಿಲ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‍ಪಾಲ್ ಆನಂದ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ್ ಹೆಗ್ಡೆ, ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಕೆ.ಟಿ. ಪೂಜಾರಿ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

























