ಕಾರ್ಕಳ : ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯಬಹುದು. ಈ ನಿಟ್ಟಿನಲ್ಲಿ ವಾಹನ ಸವಾರರ ಪಾತ್ರ ಮಹತ್ತವಾದುದು ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ. ಎಸ್. ಹೇಳಿದರು. ಅವರು ರೋಟರಿ ಕ್ಲಬ್ ನಿಟ್ಟೆ ವತಿಯಿಂದ ಸೆ. 25ರಂದು ಆಟೋ ರಿಕ್ಷಾ ಚಾಲಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಿಕ್ಷಾ ಚಾಲಕರೊಂದಿಗೆ ಸಂವಾದ ನಡೆಸಿ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಘುನಂದನ್ ಕೆ. ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಟ್ಟೆ ಪರಿಸರದ ರಿಕ್ಷಾ ಚಾಲಕರು, ರೋಟರಿ ಕ್ಲಬ್ ಸದಸ್ಯರು, ರೋಟರಿ ಸಮುದಾಯ ದಳ ಕೆಮ್ಮಣ್ಣು ಇದರ ಸದಸ್ಯರು ಉಪಸ್ಥಿತರಿದ್ದರು. ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿಯನ್ನೊಳಗೊಂಡ ಸ್ಟಿಕರ್ ಅನ್ನು ಆಟೋ ಚಾಲಕರಿಗೆ ವಿತರಿಸಲಾಯಿತು. ಡಾ. ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಶೈಲಜಾ ವಿ. ಶೆಟ್ಟಿ ವಂದಿಸಿದರು.























