ಕಾರ್ಕಳ : ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಷನ್ ಶಿಪ್‌ನಲ್ಲಿದ್ದು ನಂತರ ಮದುವೆಯಾಗಲು ನಿರಾಕರಿಸಿ ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಮಾರ್ಗರೇಟ್ ಎಂಬವರು ತಮ್ಮ ಗಂಡ ಮೃತಪಟ್ಟ ನಂತರ 2023ರಲ್ಲಿ ವಧು-ವರರ ಅನ್ವೇಷಣೆ ಜೋಡಿ ಆಪ್‌ನಲ್ಲಿ ಪ್ರೊಫೈಲ್ ಹಾಕಿದ್ದು, 2023ರ ನವೆಂಬರ್ 21ರಂದು ಸೂಡಾ ಗ್ರಾಮದ ಜಂತ್ರ ನಿವಾಸಿ ರೋನಾಲ್ಡ್ ಫೆರ್ನಾಂಡಿಸ್ ಎಂಬವರು ಕರೆ ಮಾಡಿ ಪರಿಚಯಿಸಿಕೊಂಡಿದ್ದಾರೆ. ನಂತರ ಆತ ನ. 22ರಂದು ಜಂತ್ರದಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದು, ಮದುವೆ ಬಗ್ಗೆ ಮಾತನಾಡಲು ಮನೆಯವರು ಬರುತ್ತಾರೆಂದು ನಂಬಿಸಿ ಮನೆಯಲ್ಲಿಯೇ ನಿಲ್ಲಿಸಿ ಮರುದಿನ ಊರಿಗೆ ಹೋಗುವಂತೆ ತಿಳಿಸಿ ಮಾರ್ಗರೇಟ್ ಅವರನ್ನು ಬೆಳ್ಮಣ್ ಬಸ್ ಸ್ಟಾಂಡ್‌ಗೆ ಬಿಟ್ಟಿರುತ್ತಾನೆ. ಬಳಿಕ ರೋನಾಲ್ಡ್ ಫೆರ್ನಾಂಡಿಸ್ ನ.24ರಂದು ಶಿವಮೊಗ್ಗಕ್ಕೆ ಹೋಗಿ ಮಾರ್ಗರೇಟ್ ಅವರನ್ನು ಮದುವೆಯಾಗುವುದಾಗಿ ನಂಬಿಸಿ ತಮ್ಮ ಮನೆಗೆ ಕರೆದುಕೊಂಡು ಬಂದು ಸುಮಾರು ಒಂದು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಷನ್ ಶಿಪ್‌ನಲ್ಲಿದ್ದರು. ಗರ್ಭವತಿಯಾದ ಮಾರ್ಗರೇಟ್ ಮದುವೆಯಾಗುವಂತೆ ಒತ್ತಾಯ ಮಾಡಿದಾಗ 2024ರ ನ.2 ರಂದು ರಾತ್ರಿ ಗಲಾಟೆ ಮಾಡಿ ಮಾರ್ಗರೇಟ್ ಅವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಹೊಟ್ಟೆಗೆ ತುಳಿದು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಹೊಟ್ಟೆಗೆ ತುಳಿದಿರುವುದರಿಂದ ಗರ್ಭಪಾತ ಆಗಿರುತ್ತದೆ. ಈ ಬಗ್ಗೆ ಮಾರ್ಗರೇಟ್ ನೀಡಿದ ದೂರಿನಂತೆ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.























