ಬೆಂಗಳೂರು : ಆರ್‌ಸಿಬಿ 2025ರ ಜೂ.4 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿದೆ. ಹೊಸದಾಗಿ ಪ್ರಾರಂಭಿಸಲಾದ ಆರ್‌ಸಿಬಿ ಕೇರ್ಸ್ ನಿಧಿಯ ಅಡಿಯಲ್ಲಿ ಈ ನೆರವು ಘೋಷಿಸಲಾಗಿದೆ. ಈ ಬಗ್ಗೆ ಆರ್‌ಸಿಬಿ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. 18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ನಲ್ಲಿ ಗೆಲುವು ಸಾಧಿಸಿದ ಸಲುವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಗೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಜನದಟ್ಟಣೆಯಿಂದಾಗಿ 11 ಜನರು ಸಾವನ್ನಪ್ಪಿದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ʼಜೂನ್ 4, 2025- ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನಷ್ಟೇ ಅಲ್ಲ…ನಮ್ಮ ಕುಟುಂಬ ಸದಸ್ಯರನ್ನು. ಅವರು ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರು ಬಿಟ್ಟುಹೋದ ಜಾಗವನ್ನು ಎಷ್ಟೇ ಬೆಂಬಲ ನೀಡಿದರೂ ತುಂಬಲು ಸಾಧ್ಯವಿಲ್ಲ. ಆದರೆ ಮೊದಲ ಹೆಜ್ಜೆಯಾಗಿ ಮತ್ತು ಅತ್ಯಂತ ಗೌರವದಿಂದ ಆರ್‌ಸಿಬಿ ಅವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಗಳನ್ನು ನೀಡಿದೆ. ಕೇವಲ ಆರ್ಥಿಕ ನೆರವಿನಂತೆ ಅಲ್ಲ, ಆದರೆ ಸಹಾನುಭೂತಿ, ಏಕತೆ ಮತ್ತು ನಿರಂತರ ಆರೈಕೆಯ ಭರವಸೆ. ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಆಗಿದೆ. ಅವರ ಸ್ಮರಣೆಯನ್ನು ಗೌರವಿಸುವ ಮೂಲಕ ಪ್ರಾರಂಭವಾಗುವ ಅರ್ಥಪೂರ್ಣ ಕಾರ್ಯಕ್ರಮ ದೀರ್ಘಾವಧಿಯ ಬದ್ಧತೆ. ಪ್ರತಿ ಹೆಜ್ಜೆಯೂ ಅಭಿಮಾನಿಗಳು ಏನನ್ನು ಅನುಭವಿಸುತ್ತಾರೆ, ನಿರೀಕ್ಷಿಸುತ್ತಾರೆ ಮತ್ತು ಅರ್ಹರು ಎಂಬುದನ್ನು ಪ್ರತಿಬಿಂಬಿಸುತ್ತದೆʼ. ಎಂದು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

































































