ದರ್ಶನ್ ಜಾಮೀನು‌ ಏಕೆ ರದ್ದು ಮಾಡಬಾರದು ಸುಪ್ರೀಂ ಕೋರ್ಟ್‌ ಪ್ರಶ್ನೆ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಜು. 17ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ರಾಜ್ಯ ಸರಕಾರದ ದಾಖಲೆಗಳನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಆರೋಪಿಗಳ ಪರ ವಕೀಲರ ವಾದ ಮಂಡನೆಯನ್ನು ಜುಲೈ 22ಕ್ಕೆ ನಿಗದಿ ಪಡಿಸಿದೆ. ಅಂದು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದ್ದು, ದರ್ಶನ್, ಪವಿತ್ರಾ‌ ಗೌಡ ಸೇರಿದಂತೆ ಏಳು ಮಂದಿಯ ಭವಿಷ್ಯ ಅವತ್ತು ನಿರ್ಧಾರವಾಗಲಿದೆ. ನ್ಯಾಯಮೂರ್ತಿ ಜೆ. ಬಿ. ಪಾದ್ರಿವಾಲಾ ನೇತೃತ್ವದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತ್ತು.

ವಿಚಾರಣೆ ವೇಳೆ ದರ್ಶನ್ ಜಾಮೀನು‌ ಏಕೆ ರದ್ದು ಮಾಡಬಾರದು ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ದರ್ಶನ್ ಪರ ವಕೀಲ‌ ಕಪಿಲ್ ಸಿಬಲ್‌, 262 ಸಾಕ್ಷ್ಯಗಳ ವಿಚಾರಣೆ ಮಾಡಲಾಗಿದೆ. ದರ್ಶನ್ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಾದಿಸಿದ್ದರು. ಆರೋಪಿ ದರ್ಶನ್ ಪರ ವಕೀಲರ ವಾದ ಒಪ್ಪದ ಕೋರ್ಟ್ ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನು ಸೂಕ್ತವಾಗಿ ಬಳಸಿಲ್ಲ ಎಂದಿರುವ ನ್ಯಾಯಮೂರ್ತಿ ಪರ್ದಿವಾಲಾ ಅವರು ಈ ಬಗ್ಗೆ ಏನು ಹೇಳ ಬಯಸುತ್ತೀರಿ ಎಂದು ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಸಿಬಲ್ ವಾದ ಮಂಡಿಸಲು ಮುಂದಾದಾಗ ಜುಲೈ 22ರಂದೇ ವಾದ ಮಂಡಿಸುವಂತೆ ನ್ಯಾಯಮೂರ್ತಿ ತಿಳಿಸಿದರು.

2024ರ ಜೂ. 8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ ಹೈಕೋರ್ಟ್‌ ದರ್ಶನ್, ಪವಿತ್ರ ಗೌಡ, ಪ್ರದೂಶ್, ಜಗದೀಶ್, ಲಕ್ಷ್ಮಣ್, ಅನುಕುಮಾರ್ ಹಾಗೂ ನಾಗರಾಜುಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.











































error: Content is protected !!
Scroll to Top