ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ನೋಂದಾಯಿಸುವುದು ಕಡ್ಡಾಯ – ಜಿಲ್ಲಾಧಿಕಾರಿ

ಉಡುಪಿ : ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಅವರು ಜು. 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 14,11,209 ಜನರು ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೆ. ಅವರಲ್ಲಿ 13,42,275 ಮಂದಿ ಮಾತ್ರ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ. ಬಾಕಿ ಉಳಿದವರೂ ತಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಶೀಘ್ರದಲ್ಲಿಯೇ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ 15 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಆಧಾರ್ ಸೆಂಟರ್‌ಗಳಿಗೆ ತೆರಳಿ ತಮ್ಮ ಬೆರಳಚ್ಚು ನೀಡಿ, ಆಧಾರ್ ಕಾರ್ಡ್‌ ಸಕ್ರೀಯಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಧಾರ್ ನಿಷ್ಕಿೃಯಗೊಳ್ಳಲಿದ್ದು, ಪ್ರಸ್ತುತ 41,115 ಮಂದಿಯ ಬಯೋಮೆಟ್ರಿಕ್ ನೀಡುವುದು ಬಾಕಿ ಇದೆ. ಇದರಿಂದ ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತೊಂದರೆಯಾಗುವ ಸಾಧ್ಯತೆ ಇರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್ ನೀಡಿ, ಅಪ್‌ಡೇಟ್ ಮಾಡಿಕೊಳ್ಳಬೇಕೆಂದರು.

ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಟ್ರ್ಯಾಕರ್ 45, 832 ಮಕ್ಕಳು ದಾಖಲಾಗಿದ್ದಾರೆ. ಅವರಲ್ಲಿ 33, 425 ಮಕ್ಕಳು ಆಧಾರ್ ಕಾರ್ಡ್ ಹೊಂದಿದ್ದಾರೆ. ಬಾಕಿ ಉಳಿದ 11,947 ಮಕ್ಕಳೂ ಆಧಾರ್ ಕಾರ್ಡ್ ಹೊಂದುವುದು ಅವಶ್ಯ. ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿಯನ್ನು ಮಾಡಿಸಬೇಕು ಎಂದರು.

ಹೊರ ರಾಜ್ಯದವರ ಮೇಲೆ ನಿಗಾವಿರಲಿ
ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದಿರುವ ಜನರು ಸಹ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಆಧಾರ್ ನೋಂದಣಿಗೆ ಮುಂದಾಗುವ ಸಾಧ್ಯತೆಗಳಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಕೆಲವರು ನಕಲಿ ಆಧಾರ್ ಪ್ರತಿಗಳನ್ನು ಹೊಂದಿರುವ ಬಗ್ಗೆ ಕ್ಯೂ ಆರ್ ಕೋಡ್ ಅನ್ನು ಪರಿಶೀಲಿಸುವುದರೊಂದಿಗೆ ಆಧಾರ್ ಕಾರ್ಡ್‌ ನೈಜತೆಯನ್ನು ಪರಿಶೀಲಿಸಬೇಕು ಎಂದ ಡಿಸಿಯವರು ಸುಳ್ಳು ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಪಡೆಯಲು ಮುಂದಾಗುವುದು ಹಾಗೂ ನಕಲಿ ಆಧಾರ್ ಕಾರ್ಡ್‌ ಹೊಂದಿದ್ದಲ್ಲಿ ಅಂತಹವರ ಮೇಲೆ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜನನ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಹಿನ್ನೆಲೆ ಕೆಲವು ವಿದ್ಯಾರ್ಥಿಗಳು, ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರು ಹಾಗೂ ಹಾಸಿಗೆ ಹಿಡಿದ ಕೆಲವು ಅಂಗವಿಕಲರು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಸಮಸ್ಯೆ ಉಂಟಾಗುತ್ತಿದೆ. ಇವುಗಳನ್ನು ಕೂಡಲೇ ಬಗೆಹರಿಸಿ ಅವರಿಗೂ ಸಹ ಆಧಾರ್ ಕಾರ್ಡ್ ಪಡೆಯಲು ಅನುವು ಮಾಡಿಕೊಡಬೇಕೆಂದು ಡಿಸಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯು.ಐ.ಡಿ.ಎ.ಐ ಉಪನಿರ್ದೇಶಕ ಗುಲ್ಷನ್ ಕುಮಾರ್ ಸಿಂಗ್, ಅಸಿಸ್ಟೆಂಟ್ ಮ್ಯಾನೆಜರ್ ಮೊಹಮ್ಮದ್ ಮೂಸಾಬ್ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.











































error: Content is protected !!
Scroll to Top