ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ವಿವಾಹಕ್ಕೆ ಸಂಬಂದಿಸಿದಂತೆ ಹಿಂದೂ ವಿವಾಹ ಅಧಿನಿಯಮ 1955 ಎಂಬ ಕಾನೂನು ನಮ್ಮ ದೇಶಾದ್ಯಂತ 1955ನೇ ಇಸ್ವಿಯಿಂದ ಜಾರಿಯಲ್ಲಿರುತ್ತದೆ. ವೀರಶೈವ, ಲಿಂಗಾಯತ, ಅಥವಾ ಬ್ರಹ್ಮೊ, ಪ್ರಾರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿಗಳೂ ಸೇರಿ ಯಾವುದೇ ರೂಪ ಅಥವಾ ವಿಕಾಸವನ್ನೊಳಗೊಂಡ ಹಿಂದೂ ಮತದ ಯಾವನೇ ವ್ಯಕ್ತಿಗೆ, ಬೌದ್ಧ, ಜೈನ ಅಥವಾ ಸಿಖ್ ಮತದ ವ್ಯಕ್ತಿಗಳಿಗೆ ಈ ಕಾನೂನು ಅನ್ವಯಿಸುತ್ತದೆ.
ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಇಬ್ಬರು ಹಿಂದೂಗಳ ನಡುವಿನ ವಿವಾಹವು ಕಾನೂನು ಬದ್ಧವಾಗಿರಲು ವಿವಾಹ ಸಮಯದಲ್ಲಿ ಯಾವ ಪಕ್ಷಕಾರರಿಗೂ ಜೀವಂತ ಹೆಂಡತಿಯಾಗಲಿ, ಗಂಡನಾಗಲಿ ಇರಬಾರದು, ಹಾಗೂ ವಿವಾಹ ಕಾಲದಲ್ಲಿ, ಪಕ್ಷಕಾರರ ಪೈಕಿ ಯಾರೊಬ್ಬರೂ ಮಾನಸಿಕ ಅಸ್ವಸ್ಥತೆಯಿಂದ, ಒತ್ತಡದಿಂದ ಅಥವಾ ಮೋಸದ ಪರಿಣಾಮವಾಗಿ ಒಪ್ಪಿಗೆಯನ್ನು ನೀಡಿರಬಾರದು. ಅಂದರೆ ಒಪ್ಪಿಗೆಯು ಸ್ವಂತ ಇಚ್ಚೆಯಿಂದ ನೀಡಿರಬೇಕು.
ವಿವಾಹ ಸಮಯದಲ್ಲಿ ವರನಿಗೆ ಇಪ್ಪತ್ತೊಂದು ವರ್ಷಗಳು ಮತ್ತು ವಧುವಿಗೆ ಹದಿನೆಂಟು ವರ್ಷಗಳು ಪೂರ್ತಿಯಾಗಿರಬೇಕು. ಪಕ್ಷಕಾರರು, ನಿಷಿದ್ಧ ಬಾಂಧವ್ಯ ಶ್ರೇಣಿಯೊಳಗಿರಬಾರದು ಮತ್ತು ಪರಸ್ಪರ ಸಪಿಂಡರಾಗಿರಬಾರದು. ಅಂತರ್ಜಾತಿಯ ವಿವಾಹವನ್ನು ಈ ಅಧಿನಿಯಮದಲ್ಲಾಗಲೀ ಅಥವಾ ಇನ್ನಾವುದೇ ಕಾನೂನಿನಲ್ಲಿ ನಿಷೇಧಿಸಲಾಗಿಲ್ಲ. ಕಾನೂನಿನಲ್ಲಿ ವಿವಾಹಕ್ಕೆ ನಿರ್ಧಿಷ್ಟಪಡಿಸಿದ ವಯಸ್ಸಿಗೆ ಬಂದ ಯಾವುದೇ ಹೆಣ್ಣು ಅಥವಾ ಗಂಡು ತಮಗಿಷ್ಟವಾದ ಸಂಗಾತಿಯೊಂದಿಗೆ ವಿವಾಹವಾಗುವ ಇಲ್ಲವೇ ಪತಿ ಪತ್ನಿಯರಂತೆ ಕೂಡಿಬಾಳುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಯಾವುದೇ ಮಹಿಳೆಯು ವಿವಾಹಿತ ಪುರುಷನೊಂದಿಗೆ ಆತನ ಮಡದಿಯು ಜೀವಂತವಿರುವಾಗಲೇ ಮರು ವಿವಾಹವಾದರೆ ಅಥವಾ ಆತನೊಂದಿಗೆ ಸಹಬಾಳ್ವೆ ನಡೆಸಲು ಮುಂದಾದರೆ, ಎರಡನೇ ಪತ್ನಿ ಅಥವಾ ಉಪ-ಪತ್ನಿಗೆ ಅಂತಹ ಪುರುಷನ ಸ್ವತಿನಲ್ಲಿ ಕಾನೂನು ರೀತ್ಯಾ ಯಾವುದೇ ಹಕ್ಕುಗಳು ಲಭಿಸುವುದಿಲ್ಲ. ಪತ್ನಿಯು ಜೀವಂತವಿರುವ ಯಾವನೇ ಪುರುಷನೊಂದಿಗೆ ವಿವಾಹವಾಗುವ ಎರಡನೇ ಪತ್ನಿಗೆ ಜೀವನಾಂಶ ಕೋರುವ ಹಕ್ಕು ಇರುವುದಿಲ್ಲ. ಕಾರಣ, ಅಂತಹ ಎರಡನೇ ವಿವಾಹವನ್ನು ಈ ಅಧಿನಿಯಮದ ಅನುಷ್ಠಾನವು ಅಸಿಂಧುಗೊಳಿಸುತ್ತದೆ.

ಹಿಂದೂ ವಿವಾಹ ಅಧಿನಿಯಮದ ಕಲಂ 5 ಮತ್ತು 11 ರ ಪ್ರಕಾರ, ತಮ್ಮ ಪೂರ್ವ ವಿವಾಹದ ಸಂಗಾತಿಯು (ಪತಿಅಥವಾ ಪತ್ನಿ) ಜೀವಂತವಿರುವಾಗಲೇ ಮರು ವಿವಾಹವಾಗುವುದನ್ನು ಕಾನೂನು ಬಾಹಿರವೆನಿಸುತ್ತದೆ. ಸಪ್ತಪದಿಯೆನ್ನುವುದು ಹಿಂದೂ ಧರ್ಮೀಯರಲ್ಲಿ ವಿವಾಹದ ರೂಢಿಗತ ಆಚರಣೆಗಳಲ್ಲಿ ಒಂದು ಮತ್ತು ಸಪ್ತಪದಿಯು ಸತಿ-ಪತಿಯರಿಬ್ಬರೂ ಕೂಡಿ ನೆರವೇರಿಸುವಂತದ್ದಾಗಿದ್ದು ಏಳು ಸುತ್ತುಗಳನ್ನೊಳಗೊಂಡಿರುತ್ತದೆ. ಆ ಏಳು ಸುತ್ತುಗಳು ಅಪೂರ್ಣವಾದಲ್ಲಿ ವಿವಾಹವು ಅಸಿಂಧುವಾಗಬಹುದು. ಯಾವುದೇ ಮತ ಅಥವಾ ಧರ್ಮದ ಅನುಯಾಯಿಗಳಾಗಿರಲಿ, ಭಾರತೀಯರಾದ ಪ್ರತಿಯೊಬ್ಬರೂ ತಮ್ಮ ವಿವಾಹವನ್ನು ತಮ್ಮ ವಿವಾಹ ನೆರವೇರಲ್ಪಟ್ಟ ಆಯಾ ರಾಜ್ಯದ ಜಿಲ್ಲೆ ಅಥವಾ ತಾಲ್ಲೂಕಿನ ನೋಂದಣಾಧಿಕಾರಿಗಳಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು ಗಂಡನಾಗಲಿ, ಹಂಡತಿಯಾಗಲಿ, ಯುಕ್ತ ಕಾರಣವಿಲ್ಲದೆ ಒಬ್ಬರು ಮತ್ತೊಬ್ಬರ ಸಂಗವನ್ನು ತ್ಯಜಿಸಿರುವುದಾದರೆ ಅವರಲ್ಲಿ ಬಾಧಿತರಾದವರು, ದಾಂಪತ್ಯಾಧಿಕಾರಗಳ ಪೂರ್ವಸ್ಥಿತಿ ಪ್ರಾಪ್ತಿಗಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೂಲಕ ಆವೇದಿಸಿಕೊಳ್ಳಬಹುದುಮತ್ತು ನ್ಯಾಯಾಲಯವು ಸೂಕ್ತ ತನಿಖೆ ನಡಿಸಿ ದಾಂಪತ್ಯಾಧಿಕಾರಗಳ ಪೂರ್ವಸ್ಥಿತಿ ಪ್ರಾಪ್ತಿಯ ಬಗ್ಗೆ ಡಿಕ್ರಿ ಮಾಡಬಹುದು. ಅಂತಹ ದೌರ್ಜನ್ಯದ ಆಧಾರದ ಮೇಲೆ ಹೆಂಡತಿಯು ಗಂಡನೊಂದಿಗೆ ವಾಸಿಸುವುದನ್ನು ತಿರಸ್ಕರಿಸಬಹುದು ಮತ್ತು ಜೀವನಾಂಶವನ್ನು ಸಹ ಪಡೆಯಬಹುದು. ಪತಿಯನ್ನು ತೊರೆದು ತವರಿಗೆ ಹೋಗಿದ್ದ ಪತ್ನಿಗೆ ಪತ್ರ ಬರೆದ ಪತಿಯು ಕೂಡಲೇ ಹೊರಟು ಬಾ ಇಲ್ಲದಿದ್ದರೆ ಈ ಪತ್ರವನ್ನೇ ವಿಚ್ಛೇದನದ ನೋಟೀಸೆಂದು ತಿಳಿ ಎಂದು ಅನಗತ್ಯ ಭೀತಿ ಹುಟ್ಟಿಸಿದಾಗ, ಅಂತಹ ನೋಟೀಸು ಅಥವಾ ಬೆದರಿಕೆಯ ಪತ್ರದ ಕಾರಣದಿಂದಲೇ ಪತ್ನಿಯು ಪತಿಯನ್ನು ತಿರಸ್ಕರಿಸಬಹುದು. ಕೇವಲ ಅತ್ತೆಯ (ಗಂಡನ ತಾಯಿ) ಎದುರಿನಲ್ಲಿ ಕೌಟುಂಬಿಕ ಕಲಹ ನಡೆಯತೆಂಬ ಕ್ಷುಲ್ಲಕ ಕಾರಣ ನೀಡಿ ಪತಿಯ ಮೇಲೆ ಮಾನಸಿಕ ಹಲ್ಲೆಯ ಆಪಾದನೆ ಹೊರಿಸಿ ನ್ಯಾಯಿಕ ಪ್ರತ್ಯೇಕಿಕರಣ ಕೋರಿ ದಾವೆ ಹೊಡುವುದು ಸಮಂಜಸವಲ್ಲ.






















