ಬೆಂಗಳೂರು : ಸಿಎಂ ಸಿದ್ದರಾಮಯ್ಯರಿಂದ ಅವಮಾನಕ್ಕೀಡಾಗಿ ನಿವೃತ್ತಿಗೆ ಮುಂದಾಗಿದ್ದ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರಿಗೆ ಭಡ್ತಿ ನೀಡಲಾಗಿದೆ. ಎಎಸ್‌ಪಿ ಆಗಿದ್ದ ಬರಮನಿ ಅವರನ್ನು ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ)ರನ್ನಾಗಿ ಭಡ್ತಿ ನೀಡಿ, ಆದೇಶಿಸಲಾಗಿದೆ. ಕೆಲವು ತಿಂಗಳ ಹಿಂದೆ ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಪ್ರತಿಭಟನಾ ಜನರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರು ಯಾರು ಎಸ್‌ಪಿ ಎಂದು ಕೇಳಿ ಕೋಪಗೊಂಡು ಧಾರಾವಾಡ ಎಎಸ್‌ಪಿ ಆಗಿದ್ದ ನಾರಾಯಣ ಬರಮನಿ ಮೇಲೆ ಕೈಎತ್ತಲು ಮುಂದಾಗಿದ್ದರು. ಈ ಘಟನೆಯಿಂದ ನೊಂದಿದ್ದ ನಾರಾಯಣ ಬರಮನಿಯವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ಅಂದು ಸಿಎಂ, ಗೃಹ ಸಚಿವರು ನಾರಾಯಣ ಅವರ ಮನವೊಲಿಸಿ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಸಫಲರಾದರು. ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ನಾರಾಯಣ ಬರಮನಿ ರಾಜೀನಾಮೆ ಸಂಚಲನವನ್ನೇ ಉಂಟು ಮಾಡಿತ್ತು. ಇದೀಗ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಅವರು ಬರಮನಿ ಅವರನ್ನು ಡಿಸಿಪಿ ಆಗಿ ನೇಮಿಸಿ ಆದೇಶ ಹೊರಡಿಸಿರುತ್ತಾರೆ.
ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಎಎಸ್‌ಪಿ ನಾರಾಯಣ ಬರಮನಿಗೆ ಭಡ್ತಿ



















