ಗ್ಯಾರಂಟಿ ಯೋಜನೆ ಬೇಡವಾದರೆ ವಾಪಸ್ ಕೊಡಿ - ವಿರೋಧ ಪಕ್ಷದವರಿಗೆ ಡಿಕೆಶಿ ಸವಾಲ್
ಬೆಂಗಳೂರು : ಮಂಗಳೂರು, ಉಡುಪಿ ಭಾಗದಲ್ಲಿ ನಮಗೆ ಹೆಚ್ಚು ವೋಟ್ ಬಿದ್ದಿಲ್ಲ. ಆದರೆ, ಅಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಅವರೇ ಕ್ಯೂ ನಿಂತು ತಗೊಂಡಿದ್ದಾರೆ. ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದ್ದೇನೆ. ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ಬೇಡ ಎಂದು ವಾಪಸ್ ಕೊಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯನ್ನು ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು.

























