ಉಡುಪಿ : ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರ ಸದ್ಗತಿಗಾಗಿ, ಅಭಿನವ ಭಾರತ್ ಸಂಘಟನೆಯಿಂದ ಸೋಮವಾರ ಮಲ್ಪೆಯ ಹನುಮಾನ್ ವಿಠೋಭಾ ಭಜನಾ ಮಂದಿರದ ಹೊರಭಾಗದಲ್ಲಿ ಗೀತಾ ತ್ರಿಷ್ಟುಪ್ ಹೋಮ ನಡೆಸಿ, ಮಲ್ಪೆ ಸಮುದ್ರದಲ್ಲಿ ತಿಲ ತರ್ಪಣ ಬಿಡಲಾಯಿತು.
ಹೋಮದ ಆಯೋಜಕ, ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಹಂಚಿ ಹೋದ ಹಿಂದೂ ಸಮಾಜ ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಇದು ಘೋರ ದುರಂತ ಎಂದು ವಿಷಾದಿಸಿದರು.
ಹಿಂದೂಗಳು ಭಯೋತ್ಪಾದಕರ ಕಾಟ ಇದೆ ಎಂಬ ಕಾರಣಕ್ಕೆ ಕಾಶ್ಮೀರಕ್ಕೆ ಹೋಗುವುದಿಲ್ಲ ಎನ್ನುವಂತಾಗಿದೆ. ಇದು ಹಿಂದೂಗಳ ದುಸ್ಥಿತಿ, ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕತೆಯಿಲ್ಲ. ಏಕತೆ ಬರಬೇಕಾದರೆ ಒಂದೇ ಕುಟುಂಬ ಎಂಬ ಭಾವನೆ ಬರಬೇಕು. ಈ ಏಕತಾ ಭಾವನೆಗಾಗಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿದೆ ಎಂದರು.

ಪೆಹಲ್ಗಾಮ್‌ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡ ನೆನಪಿಲ್ಲ. ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಧಾರ್ಮಿಕವಾಗಿ ಸಮಾಜವನ್ನು ಹೇಗೆ ಒಗ್ಗೂಡಿಸಬಹುದೆಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು. ವೇದಮೂರ್ತಿ ಸುರಾಲು ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಉದ್ಯಮಿ ಅಜಯ್ ಕೊಡವೂರು, ಹಿಂದೂ ಮುಖಂಡ ಪಾಂಡುರಂಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು, ವಿಜಯ ಶೆಟ್ಟಿ, ಅಭಿನವ ಭಾರತದ ಪ್ರಮುಖರಾದ ಗುರುಪ್ರಸಾದ್ ನಾರಾವಿ, ಸಂತೋಷ್ ನಂದಳಿಕೆ, ರಮೇಶ್ ಶೆಟ್ಟಿ ತೆಳ್ಳಾರು, ಪ್ರಸಾದ್ ಮಿಯ್ಯಾರು ಮೊದಲಾದವರು ಉಪಸ್ಥಿತರಿದ್ದರು.






























































