ಎ. 23 – ಇಂದು ವಿಶ್ವ ಪುಸ್ತಕ ದಿನ

ಇದೊಂದು ಓದುವ ಸಂಸ್ಕೃತಿಯ ಭಾವ ತೀರ ಯಾನ

ಓದುವ ಹವ್ಯಾಸವು ನನಗೆ ತಾಯಿಯಿಂದ ಬಳುವಳಿಯಾಗಿ ಬಂತು. ಅಮ್ಮ ತನ್ನ ಕೊನೆಯ ಉಸಿರಿನ ತನಕ ಓದುತ್ತಲೇ ಇದ್ದವರು. ನನ್ನ ಬಾಲ್ಯದಲ್ಲಿ ನೂರಾರು ‘ಭಾರತ ಭಾರತೀ’ (ರಾಷ್ಟ್ರಪುರುಷರ ಬದುಕಿನ ಕತೆಗಳನ್ನು ಹೇಳುವ 24 ಪುಟಗಳ ಸಣ್ಣ ಸಣ್ಣ ಪುಸ್ತಕಗಳು) ಪುಸ್ತಕಗಳನ್ನು ತಂದು ನನ್ನಿಂದ ಓದಿಸಿದವರು ಅವರು. ದಿನಕ್ಕೊಂದು ಪುಸ್ತಕ ಓದದಿದ್ದರೆ ರಾತ್ರಿಯ ಊಟ ಮಿಸ್ ಆಗುತ್ತಿತ್ತು! ಆ ಭಯದಿಂದಲೇ ನನ್ನ ಓದಿನ ದೀಕ್ಷೆಯನ್ನು ಅಮ್ಮ ಆರಂಭ ಮಾಡಿದ್ದರು.

ನನ್ನ ಓರಗೆಯ ಗೆಳೆಯ, ಗೆಳತಿಯರು ಕುಂಟೆ ಬಿಲ್ಲೆ, ಕ್ರಿಕೆಟ್ ಎಂದೆಲ್ಲಾ ಮೈದಾನದಲ್ಲಿ ಓಡಾಡುವಾಗ ನಾನು ನನ್ನಷ್ಟಕ್ಕೆ ಕಾರ್ಕಳದ ಸರಕಾರಿ ಗ್ರಂಥಾಲಯದಲ್ಲಿ ನನ್ನ ರಜೆಗಳನ್ನು ಕಳೆದವನು. ಓದಲು ಕುಳಿತರೆ ಹಸಿವು, ಬಾಯಾರಿಕೆ ಎಲ್ಲವೂ ಮರೆತೇ ಹೋಗುತ್ತಿದ್ದವು.

ಆಗ ಗ್ರಂಥಾಲಯದ ಗ್ರಂಥಪಾಲಕರಾಗಿದ್ದ ಗೋವಿಂದ ರಾಯರು ನನ್ನ ಓದಿನ ಮೊದಲ ಗುರು. ನನ್ನ ಮುಂದೆ ಹೊಸ ಹೊಸ ಪುಸ್ತಕಗಳನ್ನು ತಂದು ಸುರುವಿ ‘ಇದು ಚೆನ್ನಾಗಿದೆ, ಅದು ಚೆನ್ನಾಗಿದೆ, ಅದು ಓದು, ಇದು ಓದು’ ಎಂದು ನನ್ನ ಓದಿಗೆ ವೇಗ ಕೊಟ್ಟವರು ಅವರು! ಅವರಿಗೆ ನಾನು ಕೃತಜ್ಞ.

ಹೈಸ್ಕೂಲ್ ಹಂತದಲ್ಲಿ ಇರುವಾಗ ನಾಟಕ, ಕಾದಂಬರಿ ಓದುವ ಅಭಿರುಚಿಯು ಬೆಳೆಯಿತು. ಕಾರಂತರ ಅಷ್ಟೂ ಕಾದಂಬರಿಗಳು, ಕುವೆಂಪು ಅವರ ಎಲ್ಲ ಕಾದಂಬರಿ, ಎಸ್ ಎಲ್. ಭೈರಪ್ಪ ಅವರ ಅದುವರೆಗಿನ ಹೆಚ್ಚಿನ ಕಾದಂಬರಿ ಓದಿ ಮುಗಿಸಿ ಖುಷಿ ಪಡುತ್ತಿದ್ದ ದಿನಗಳು ಅವು. ನಾನು ಪ್ರೈಮರಿ ಶಾಲೆಯಲ್ಲಿ ಮೌನದ ಓದನ್ನು ಅಭ್ಯಾಸ ಮಾಡಿದ್ದ ಕಾರಣ ನನ್ನ ಓದು ಭಾರೀ ವೇಗವಾಗಿತ್ತು. ಒಂದು ದಿನಕ್ಕೆ ಕನಿಷ್ಠ 150-200 ಪುಟಗಳನ್ನು ಭಾರೀ ಸಲೀಸಾಗಿ ಓದಿ ಮುಗಿಸುತ್ತಿದ್ದೆ! ಹಾಗೆ ಓದಿದ್ದು ನೂರಕ್ಕೆ ನೂರರಷ್ಟು ನೆನಪು ಇರುತ್ತಿತ್ತು. ಗಾಡ್ಸ್ ಗ್ರೇಸ್!

ಭೈರಪ್ಪ ಅವರ ಪರ್ವ ಮತ್ತು ಮಂದ್ರ ,ಕಾರಂತರ ಚೋಮನ ದುಡಿ, ಅನಕೃ ಅವರ ನಾಟ್ಯರಾಣಿ ಶಾಂತಲೆ, ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಬಾಬು ಕೃಷ್ಣ ಮೂರ್ತಿ ಅವರ ಅಜೇಯ, ತರಾಸು ಅವರ ನಾಗರಹಾವು ಇವುಗಳು ನನಗೆ ಎಂದಿಗೂ ಮರೆಯದ ಅನುಭವ ನೀಡಿವೆ. ನನ್ನ ಕಾಲೇಜು ಜೀವನವನ್ನು ಮುಗಿಸುವಾಗ ಅಂದಾಜು 300-350ರಷ್ಟು ಕಾದಂಬರಿಗಳನ್ನು ಓದಿ ಮುಗಿಸಿಬಿಟ್ಟಿದ್ದೆ ಅಂದರೆ ನನಗೇ ಅಚ್ಚರಿ ಆಗುತ್ತದೆ! ಹಾಸ್ಯ ಸಾಹಿತಿ ಬೀಚಿ ನನ್ನ ಹಾಟ್ ಫೇವರೆಟ್!

ಮುಂದೆ ತೆಲುಗಿನ ಪ್ರಸಿದ್ಧ ಸಾಹಿತಿ ಯಂಡಮೂರಿ ಅವರ ಕಪ್ಪಂಚು ಬಿಳಿ ಸೀರೆ ಮೊದಲಾದ ಕೃತಿಗಳು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದವು. ಆಗ ನನ್ನನ್ನು ತಟ್ಟನೆ ಸೆಳೆದದ್ದು ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ. ನಾನು ಅವರ ಬರವಣಿಗೆಯ ಶೈಲಿಗೆ ಮಾರು ಹೋಗಿದ್ದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರು ಬರೆದ ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ನಾನು ಓದಿದ್ದೆ. ಅವರ ಪುಸ್ತಕಗಳನ್ನು ಓದಿ ಪುಸ್ತಕ ಕೆಳಗೆ ಇಡುವ ತನಕ ನಿದ್ದೆಯೇ ಬರುತ್ತಿರಲಿಲ್ಲ!

ಇಂದಿಗೂ ನನ್ನ ಬರವಣಿಗೆಯ ಮೇಲೆ ಇರುವ ದಟ್ಟವಾದ ಪ್ರಭಾವ ಎಂದರೆ ಅದು ಬೆಳಗೆರೆಯವರದ್ದೇ! ಒಬ್ಬ ಲೇಖಕನಾಗಿ ಅವರು ನನಗೆ ಇಂದಿಗೂ ಅಕ್ಷರ ಗುರು.

ಮುಂದೆ 1994ರಲ್ಲಿ ನಾನು ವಿಕಸನದ ತರಬೇತುದಾರ ಆದ ನಂತರ ನನ್ನ ಗಮನ ಸೆಳೆದ ಪುಸ್ತಕಗಳು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ ಸರಣಿ, ಷಡಕ್ಷರಿ ಅವರ ಕ್ಷಣ ಹೊತ್ತು ಆಣಿ ಮುತ್ತು ಸರಣಿ, ಪ್ರತಾಪ ಸಿಂಹ ಬರೆದ ಬೆತ್ತಲೆ ಜಗತ್ತು ಸರಣಿ, ವಿಶ್ವೇಶ್ವರ ಭಟ್ಟರು ಬರೆದ ಸಾವಿರಾರು ಪತ್ರಿಕಾ ಲೇಖನಗಳು, ಜಗದಾತ್ಮಾನಂದ ಅವರ ಬದುಕಲು ಕಲಿಯಿರಿ ಮೊದಲಾದ ಪುಸ್ತಕಗಳು…..ಅವು ಮುಂದೆ ನನಗೆ ಕೈದೇವಿಗೆ ಆದವು.
ಎ. ಆರ್. ಮಣಿಕಾಂತ್ ಅವರು ಬರೆದ ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದರೆ ಆಕಾಶ, ಭಾವ ತೀರ ಯಾನ ನನಗೆ ರೋಮಾಂಚನವನ್ನು ಕೊಟ್ಟ ಪುಸ್ತಕಗಳು.

ನಾನು ನನ್ನ ತರಬೇತಿಯಲ್ಲಿ, ಭಾಷಣಗಳಲ್ಲಿ ಕೊಡುವ ಅಷ್ಟೂ ಉದಾಹರಣೆಗಳು ನಾನು ಓದಿದ ಪುಸ್ತಕಗಳಿಂದ ಎರವಲು ಪಡೆದವುಗಳು. ಹಾಗೆ ಅದರ ಕಾಪಿ ರೈಟ್ ನಾನು ಓದಿದ ಲೇಖಕರಿಗೆ ಸಲ್ಲಬೇಕು ಹೊರತು ನನಗಲ್ಲ. ನಾನು ಪುಸ್ತಕಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಹೆಚ್ಚು ಓದುತ್ತಿರುವುದು ಆತ್ಮಚರಿತ್ರೆಯ ಪುಸ್ತಕಗಳನ್ನು. ಅವುಗಳು ಕೊಡುವ ಸುಖವನ್ನು ನನಗೆ ಬೇರೆ ಯಾವುದೂ ಕೊಡಲು ಸಾಧ್ಯವಿಲ್ಲ.

ಈ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಕೂಡ ನನಗೆ ಪುಸ್ತಕಗಳೇ ಒಡನಾಡಿಗಳು. ಗ್ರಂಥಾಲಯವೆ ಸ್ವರ್ಗ. ನನ್ನ ಓದುಗ ಗೆಳೆಯರ ಅನುಕೂಲಕ್ಕಾಗಿ ನಾನು ಹಲವು ಬಾರಿ ಓದಿದ ಮತ್ತು ನನ್ನ ಮೇಲೆ ದಟ್ಟ ಪ್ರಭಾವ ಬೀರಿದ ೨೦ ಪುಸ್ತಕಗಳ ಪಟ್ಟಿ ಸಿದ್ಧಮಾಡಿದ್ದೇನೆ. ಇದಕ್ಕೆ ಯಾವ ಅನುಕ್ರಮಣಿಕೆಯೂ ಇಲ್ಲ. ಎಲ್ಲವೂ ಅಮೋಘ ಕೃತಿಗಳೇ.

1) ಅಣ್ಣನ ನೆನಪು – ಪೂರ್ಣಚಂದ್ರ ತೇಜಸ್ವಿ ಅವರು ತನ್ನ ತಂದೆ ಕುವೆಂಪು ಬಗ್ಗೆ ಬರೆದ ಪುಸ್ತಕ.
2) ಖಾಸ್ ಬಾತ್ – ರವಿ ಬೆಳಗೆರೆ.
3) ನನ್ನ ತಮ್ಮ ಶಂಕರ – ತನ್ನ ತಮ್ಮ ಶಂಕರನಾಗ್ ಬಗ್ಗೆ ಅನಂತನಾಗ್ ಬರೆದ ಪುಸ್ತಕ.
4) ಹಿಮಾಲಯನ್ ಬ್ಲಂಡರ್ – ರವಿ ಬೆಳಗೆರೆ(ಚೀನಾ ಯುದ್ಧದಲ್ಲಿ ಹೋರಾಡಿದ ಒಬ್ಬ ಸೈನಿಕನ ಕಥೆ)
5) ಅದಮ್ಯ ಚೇತನ – ಅಬ್ದುಲ್ ಕಲಾಂ.
6) ರಂಗಭೂಮಿ – ಹಿಂದಿಯಲ್ಲಿ ಪ್ರೇಮಚಂದ್ (ಕನ್ನಡಕ್ಕೆ ಹೆಚ್. ಡಿ. ಶಾಂತಾ)
7) ದುರ್ಗಾಸ್ತಮಾನ – ತರಾಸು (ಕನ್ನಡದ ಅತ್ಯುತ್ತಮ ಐತಿಹಾಸಿಕ ಕಾದಂಬರಿ)
8) ಶರ ಪಂಜರ – ತ್ರಿವೇಣಿ ಅವರ ಅದ್ಭುತ ಕಾದಂಬರಿ. ಇದು ಮನೋವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ. ಇದನ್ನು ಪುಟ್ಟಣ್ಣ ಕಣಗಾಲ್ ಮುಂದೆ ಸಿನೆಮಾ ಮಾಡಿದರು.
9) ಮರಣ ಮೃದಂಗ – ಯಂಡಮೂರಿ (ಕನ್ನಡಕ್ಕೆ ಸರಿತಾ ಜ್ಞಾನಾನಂದ)
10) ಸಮರ ಭೈರವಿ – ಸಂತೋಷ್ ತಮ್ಮಯ್ಯ.
11) ಸೂಫಿ – ಡಾಕ್ಟರ್ ಗುರುರಾಜ ಕರ್ಜಗಿ. ನೂರಾರು ಮಾನವೀಯತೆಯ ಪ್ರೇಮಕತೆಗಳು. ಸ್ಫೂರ್ತಿಯ ಹಣತೆಗಳು.
12) ಗುಟ್ಟೊಂದು ಹೇಳುವೆ – ಸುಧಾ ಮೂರ್ತಿ ಅವರ ಜೀವನದ ರೋಮಾಂಚಕ ಅನುಭವಗಳು.
13) ಅಗ್ನಿಯ ರೆಕ್ಕೆಗಳು – ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ.
14) ಅಜೇಯ – ಬಾಬು ಕೃಷ್ಣಮೂರ್ತಿ(ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಕಥೆ)
15) ರಾಮಾಯಣ ಮತ್ತು ಮಹಾಭಾರತದ ಪಾತ್ರ ಪ್ರಪಂಚ – ಡಾಕ್ಟರ್ ಕೆ. ಎಸ್. ನಾರಾಯಣಾಚಾರ್ಯ.
16) ಸಾಹಿತ್ಯ ಸಂಗತಿ – ಡಾಕ್ಟರ್ ಬಸವರಾಜ್ ಸಬರದ.
17) ಧರೆ ಹೊತ್ತಿ ಉರಿದಾಗ- ಅಲೋಕ್ ಭಲ್ಲ ( ಭಾರತ ಪಾಕ್ ವಿಭಜನೆಯ ರಕ್ತರಂಜಿತ ಕತೆಗಳು)
18) ಹಾಡು ಹಕ್ಕಿಯ ಹೃದಯ ಗೀತೆ – ವಸಂತ್ ನಾಡಿಗೇರ (ಲತಾ ಮಂಗೇಷ್ಕರ್ ಅವರ ಜೀವನ ಚರಿತ್ರೆ)
19) ಬೇಟೆ – ಮಹಾಶ್ವೇತಾದೇವಿ (ಕನ್ನಡಕ್ಕೆ ಡಾಕ್ಟರ್ ಶ್ರೀಮತಿ)
20) ಯಯಾತಿ – ವಿ. ಸ. ಖಾಂಡೇಕರ್ ( ಮರಾಠಿ ಮತ್ತು ಕನ್ನಡ)
ಇವಿಷ್ಟೇ ಅಲ್ಲ. ಇನ್ನೂ ಅಗಾಧವಾದ ಜ್ಞಾನರಾಶಿ ನಾನು ಓದಲು ಬಾಕಿ ಇದೆ. ನಾನು ಇನ್ನೂ ತುಂಬಾನೇ ಓದಲು ಬಾಕಿ ಇದೆ ಅನ್ನಿಸುತ್ತದೆ. ಮತ್ತೆ ತಮಗೆಲ್ಲಾ ವಿಶ್ವ ಪುಸ್ತಕ ದಿನದ ಶುಭಾಶಯಗಳು.





























































































































error: Content is protected !!
Scroll to Top