ಪಹಲ್ಗಾಮ್ ಉಗ್ರರ ದಾಳಿ : ಪಿಎಂ ನೇತೃತ್ವದಲ್ಲಿ ತುರ್ತು ಭದ್ರತಾ ಸಮಿತಿ ಸಭೆ

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಖ್ಯಾತ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ನಿನ್ನೆ (ಏ. 22) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ ಎಂದು ವರಿದಿಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಮಂಗಳವಾರ ರಾತ್ರಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಉನ್ನತ ಮಟ್ಟದ ಭದ್ರತಾ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಎನ್‌ಎಸ್‌ಎ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಭದ್ರತಾ ಸಲಹೆಗಾರರೊಂದಿಗೆ, ಪ್ರಮುಖ ಅಧಿಕಾರಿಗಳೊಂದಿಗೆ ನಿರ್ಣಾಯಕ ಸಭೆ ನಡೆಸಿದರು. ಪ್ರಧಾನಿಯವರು ಪರಿಸ್ಥಿತಿಯನ್ನು ಪರಿಶೀಲಿಸಿ ರಾಜತಾಂತ್ರಿಕ ಸಂಪರ್ಕದ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ಬಲವಾದ, ಸಂಘಟಿತ ಪ್ರತಿಕ್ರಿಯೆಯನ್ನು ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.

ಹಿಂದೂಗಳೇ ಟಾರ್ಗೆಟ್
ಹಿಂದೂಗಳನ್ನೇ ಟಾರ್ಗೆಟ್ ಮಾಡಿದ ನರಹಂತಕರು ಧರ್ಮ ಕೇಳಿ ಎದೆಗೆ ಗುಂಡಿಕ್ಕಿ ರಕ್ತದೋಕುಳಿಯಾಡಿದ್ದಾರೆ. ಹೆಸರೇನು? ಯಾವ ಧರ್ಮ ಎಂದು ಕೇಳಿ ಹತ್ಯೆ ಮಾಡಿದಲ್ಲದೇ ಇದನ್ನು ಮೋದಿಗೆ ಹೋಗಿ ಹೇಳಿ ಎಂದು ಕೌರ್ಯ ಮೆರೆದಿದ್ದಾರೆ. 2019ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಘಟನೆಯ ಬಳಿಕ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಂದಿವೆ. ಹತ್ಯೆ ನಡೆದ ರೀತಿಗಳು ಆತಂಕ ಮೂಡಿಸಿವೆ. ಸೇವಾ ಸಮವಸ್ತ್ರದಲ್ಲಿ ಬಂದ ಭಯೋತ್ಪಾದಕರು, ಪ್ರವಾಸಿಗರ ಹೆಸರು ಕೇಳಿ, ಗುರುತಿನ ಚೀಟಿಗಳನ್ನು ಪರಿಶೀಲಿಸಿ ಹಿಂದೂಗಳೆಂದು ಖಚಿತಪಡಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದಿಂದ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್, ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್ ಭೂಷಣ್ ಹಾಗೂ ಮದುಸೂಧನ್ ಅವರನ್ನು ಹೀಗೆ ಹತ್ಯೆ ಮಾಡಲಾಗಿದೆ. ಟಿಆರ್‌ಎಫ್‌ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿದೆ.

ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ

ಕೆಲವೇ ಗಂಟೆಗಳಲ್ಲಿ, ಶಂಕಿತ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗಗೊಂಡಿದೆ. ವೀಡಿಯೊವೊಂದರಲ್ಲಿ ತೆಗೆದ ಸ್ಕ್ರೀನ್‌ಶಾಟ್‌ನಲ್ಲಿ, ಭಯೋತ್ಪಾದಕನೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಕುರ್ತಾದಲ್ಲಿ ಎಕೆ ಸರಣಿಯ ಅಸಾಲ್ಟ್ ರೈಫಲ್‌ನೊಂದಿಗೆ ಕಾಣಿಸಿಕೊಂಡಿದ್ದಾನೆ. ಭದ್ರತಾ ಸಂಸ್ಥೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಇವನೂ ಒಬ್ಬ ಎಂದು ಹೇಳಿದ್ದಾರೆ.

ಕನ್ನಡಿಗರ ಸಹಾಯಕ್ಕೆ ಹೆಲ್ಪ್ ಲೈನ್
ಕನ್ನಡಿಗರ ಸಹಾಯಕ್ಕೆ ರಾಜ್ಯ ಸರಕಾರ ಹೆಲ್ಪ್ ಲೈನ್ ಆರಂಭಿಸಿದೆ. ಕರ್ನಾಟಕದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಪ್ರವಾಸಿ Tour Operators & Travel Agents ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಕೆಳಕಂಡ ಸಹಾಯವಾಣಿಗೆ ನೀಡಬೇಕೆಂದು ಕೋರಿದೆ.
ಹೆಲ್ಪ್ ಲೈನ್ ನಂಬರ್
080-43344334
080-43344335
080-43344336
080-43344342

ಹಲವೆಡೆ ಬಂದ್-ಪ್ರತಿಭಟನೆ
ಕಾಶ್ಮೀರ ಕಣಿವೆ ಪಹಲ್ಗಾಮ್ ದಾಳಿ ಖಂಡಿಸಿ, ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ವ್ಯಾಪಾರಸ್ಥರು ದಾಳಿ ಖಂಡಿಸಿ ಬಂದ್ ನಡೆಸುತ್ತಿದ್ದಾರೆ. ಜಮ್ಮುವಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಶಿವಸೇನೆ, ವಕೀಲರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಜಮ್ಮು ಮಾತ್ರವಲ್ಲದೆ ದೇಶದ ವಿವಿಧೆಡೆ ಈ ಘಟನೆಯನ್ನು ವಿರೋಧಿಸಿದ ಪ್ರತಿಭಟನೆ ನಡೆಯುತ್ತಿದೆ.

‘ಬಿಸ್ಮಿಲ್ಲಾ, ಬಿಸ್ಮಿಲ್ಲಾ’ ಎಂದು ಘೋಷಣೆ ಕೂಗುತ್ತಾ ನನ್ನ ರಕ್ಷಿಸಿದರು : ಮೃತ ಮಂಜುನಾಥ್ ಪತ್ನಿ ಪಲ್ಲವಿ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮಗ 97% ಅಂಕ ಗಳಿಸಿದ್ದು ಸಂಭ್ರಮಾಚರಣೆ ಮಾಡಲು ಶಿವಮೊಗ್ಗದ ಮಂಜುನಾಥ್ ತನ್ನ ಪತ್ನಿ ಮತ್ತು ಮಗನೊಂದಿಗೆ ಏಪ್ರಿಲ್ 19 ರಂದು ಕಾಶ್ಮೀರಕ್ಕೆ ತೆರಳಿದ್ದರು. ಅವರು ಏಪ್ರಿಲ್ 24 ರಂದು ಶಿವಮೊಗ್ಗಕ್ಕೆ ಹಿಂತಿರುಗಬೇಕಿತ್ತು. ಆದರೆ, ನಿನ್ನೆ ನಡೆದ ದಾಳಿಗೆ ಮಂಜುನಾಥ್‌ ಬಲಿಯಾಗಿದ್ದಾರೆ. ಭಯೋತ್ಪಾದಕರು ನನ್ನ ಗಂಡನನ್ನು ನನ್ನ ಕಣ್ಣೆದುರೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಂಜುನಾಥ್ ಅವರ ಪತ್ನಿ ಪಲ್ಲವಿ ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.

ನನ್ನ ಪತಿ ಅಂಗಡಿಯವನೊಂದಿಗೆ ಮಾತನಾಡುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದರು. ಅವರ ತಲೆಗೆ ಗುಂಡು ಬಿತ್ತು, ಮೂರರಿಂದ ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ನನ್ನ ಗಂಡನನ್ನು ಕೊಂದ ನಂತರ, ನಾನು ಅವರಲ್ಲಿ ಒಬ್ಬನನ್ನು ನನ್ನನ್ನೂ ಕೊಲ್ಲುವಂತೆ ಕೇಳಿದೆ. ಅವನು, ‘ನಹಿನ್ ಮಾರೇಂಗೆ, ಮೋದಿ ಕೋ ಬೋಲ್ಡೋ’ (ನಾವು ನಿನ್ನನ್ನು ಕೊಲ್ಲುವುದಿಲ್ಲ, ಪ್ರಧಾನಿ ಮೋದಿಗೆ ಹೇಳು) ಎಂದು ಹೇಳಿದನು. ಮೂವರು ಸ್ಥಳೀಯ ಕಾಶ್ಮೀರಿ ಪುರುಷರು “ಬಿಸ್ಮಿಲ್ಲಾ, ಬಿಸ್ಮಿಲ್ಲಾ” ಎಂದು ಘೋಷಣೆ ಕೂಗುತ್ತಾ ನನ್ನನ್ನು ರಕ್ಷಿಸಿದರು. “ಅವರು ನನ್ನ ಸಹೋದರರಂತೆ” ಎಂದು ಪಲ್ಲವಿ ಮಾಧ್ಯಮದವರಿಗೆ ಹೇಳಿದರು.





























































































































error: Content is protected !!
Scroll to Top