ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಕುಡುಪುಲಾಜೆ

ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಮಾತಿದೆ. ಕಠಿಣ ಪರಿಶ್ರಮ, ಶ್ರದ್ಧೆ, ನಂಬಿಕೆಯಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎನ್ನುವುದಕ್ಕೆ ಒಂದು ಉದಾಹರಣೆ ಧಾರ್ಮಿಕ ಮುಂದಾಳು, ಹಿಂದುತ್ವದ ಪ್ರಖರವಾದಿ, ಮಹೇಶ್‌ ಶೆಟ್ಟಿ ಕುಡುಪುಲಾಜೆ.

ಬರಿಗೈಯಲ್ಲಿ ತನ್ನ 15ನೇ ವರ್ಷಕ್ಕೆ ಮುಂಬೈ ತೆರಳಿದ ಮಹೇಶ್‌ ಶೆಟ್ಟಿ ಇಂದು ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಯಶಸ್ವಿ ಉದ್ಯಮಿ. ಇಂದು (ಎ. 24) ಮಹೇಶ್‌ ಶೆಟ್ಟಿ ಅವರ 50ನೇ ವರ್ಷದ ಹುಟ್ಟು ಹಬ್ಬ. ಕೃಷಿಕ ಕುಟುಂಬ ಹಾಗೂ ಅವಿಭಕ್ತ ಕುಟುಂಬದ ಹಿನ್ನೆಲೆಯ ತೆಳ್ಳಾರು ಕುಡುಪುಲಾಜೆ ಮನೆತನದ ಅಂಬಾ ರಮೇಶ್‌ ಶೆಟ್ಟಿ ದಂಪತಿಯ ಪುತ್ರ ಮಹೇಶ್‌ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತೆಳ್ಳಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದವರು.
ಬಡತನದಿಂದ ವಿದ್ಯಾಭ್ಯಾಸ ಮುಂದುವರಿಸಲಾಗದೇ ಸಣ್ಣ ವಯಸ್ಸಿನಲ್ಲೆ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿತ್ತು.

ನಾಲ್ಕು ದಶಕಗಳ ಹಿಂದೆ ಕರಾವಳಿಯ ಹುಡುಗರಿಗೆ ಉದ್ಯೋಗ ನೀಡಿ ಸಾವಿರಾರು ಕುಟುಂಬಕ್ಕೆ ಆಧಾರವಾಗಿದ್ದ ಮಾಯಾನಗರಿ ಮುಂಬೈ ಮಹೇಶಣ್ಣನನ್ನೂ ಕೂಡ ಆಕರ್ಷಿಸಿತ್ತು. ಹೆಚ್ಚೇನು ವಿದ್ಯಾಭ್ಯಾಸ ಇಲ್ಲದ ಹಿಂದಿ, ಮರಾಠಿ ಭಾಷೆ ಅರಿಯದ ಮಹೇಶಣ್ಣ ಮುಂಬೈಗೆ ತೆರಳಿ ಹೊಟೇಲ್‌ನಲ್ಲಿ ಗ್ಲಾಸ್‌, ಪ್ಲೇಟ್‌ ತೊಳೆಯುವ ಕ್ಲೀನರ್‌ ಆಗಿ ಕೆಲಸಕ್ಕೆ ಸೇರಿಕೊಂಡರು. ಅವರ ಮಾತಿನಂತೆ ಈಗಿನ ಹಾಗೆ ನೆನಪಾದಾಗ ಮನೆಯವರ ಜೊತೆ ಮಾತನಾಡಲು ಅಂದು ಮೊಬೈಲ್ ಸೌಲಭ್ಯಗಳಿರಲಿಲ್ಲ. ಅಂದು ಪತ್ರ ವ್ಯವಹಾರ ಮಾತ್ರವಿತ್ತು. ಪತ್ರ ಬರೆದು ಬಳಿಕ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿತ್ತು. ಮನಸ್ಸಿಗೆ ತುಂಬಾ ಬೇಸರವಾದಾಗ ನೆನಪು ಮಾಡಿದ್ದು ಮನೆ ಹಾಗೂ ಊರಿನ ದೈವ ದೇವರನ್ನು. ದೈವ ದೇವರ ಅನುಗ್ರಹದಿಂದಲೇ ನಾನು ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಾಯಿತು ಎಂದು‌ ಮಹೇಶಣ್ಣ ಹೇಳುತ್ತಾರೆ.

ಸಿಡಿದೇಳುವ ಗುಣವೂ ಇದೆ
ಒಬ್ಬ ಕಾರ್ಮಿಕನ ಸುಖ, ದುಃಖದ ಬಗ್ಗೆ ಅರಿವಿರುವ ಮಹೇಶಣ್ಣ ತನ್ನೊಟ್ಟಿಗೆ ದುಡಿಯುವ ಕೆಲಸಗಾರರನ್ನು ಅತ್ಯಂತ ಗೌರವದಿಂದ ನೋಡುತ್ತಾರೆ ಹಾಗೂ ಕೆಲಸಗಾರರಿಗೆ ವೇತನ, ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಜಾಗ್ರತೆ ವಹಿಸುತ್ತಾರೆ. ಹತ್ತಾರು ಹೊಟೇಲ್‌ಗಳಿದ್ದರೂ ಅದರ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಳ್ಳದೇ ಅದರ ಸಂಪೂರ್ಣ ಜವಾಬ್ದಾರಿಯನ್ನು ಕೆಲಸಗಾರರಿಗೆ ಬಿಟ್ಟು ಊರಿಗೆ ಬಂದಾಗ ಆರಾಮವಾಗಿದ್ದಂತೆ ಕಾಣಿಸುತ್ತಾರೆ. ನಾಳೆಯ ಬಗ್ಗೆ ಚಿಂತಿಸದೇ ಖುಷಿ ಖುಷಿಯಾಗಿರುವುದು ಮಹೇಶಣ್ಣನ ಸ್ವಭಾವ. ಬಡತನ ಕಷ್ಟದ ಬಗ್ಗೆ ಸ್ವತಃ ಅನುಭವ ಹೊಂದಿರುವ ಅವರು ಸಣ್ಣ ಮಕ್ಕಳಿಂದ ದೊಡ್ಡವರ ಮಾತನ್ನು ಸಮಾನಚಿತ್ತದಿಂದ ಆಲಿಸುವವರು. ಅವರ ಸುಖ ದುಃಖದಲ್ಲಿ ಭಾಗಿಗಳಾಗುವವರು. ಶಾಂತ ಸ್ವಭಾವದ ಮಹೇಶಣ್ಣ ಅನ್ಯಾಯ ಅಂಥ ಬಂದಾಗ ಸಿಡಿದೇಳುವ ಮನಸ್ಥಿತಿ ಅವರದ್ದು.

ಮುನಿಯಾಲು ಪ್ರೊ ಕಬಡ್ಡಿ
ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿ ಅದರ ಗುಂಗಿನಲ್ಲಿ ಯುವಜನತೆ ತೇಲಾಡುತ್ತಿದ್ದಾಗ ಅದರ ಜನಪ್ರಿಯತೆಯಿಂದ ಪ್ರೇರಣೆಗೊಂಡು ತನ್ನ ಸಹೋದರ ಗಿರೀಶ್‌ ಜೊತೆಗೂಡಿ 2016ರಲ್ಲಿ ಗ್ರಾಮೀಣ ಪ್ರದೇಶವಾದ ಮುನಿಯಾಲಿನಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಯೋಜನೆ ಮಾಡಿ ಅದನ್ನು ಯಶಸ್ವಿಗೊಳಿಸಿದವರು ಮಹೇಶಣ್ಣ. ಅಂದು ನಡೆದ ಕಬಡ್ಡಿ ಪಂದ್ಯಾಟ ಇಂದಿಗೂ ಕಾರ್ಕಳದ ಮಟ್ಟಿಗೆ ಬಲು ಅದ್ಧೂರಿಯ ಕ್ರೀಡಾಕೂಟ.

ಭಾರತ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಮಹಮ್ಮದ್‌ ಅಜರುದ್ದೀನ್‌


ಬಾಲಿವುಡ್‌ ತಾರೆಯರು ಮತು ಕ್ರಿಕೆಟ್‌ ಆಟಗಾರರೊಂದಿಗೆ ಉತ್ತಮ ಒಡನಾಟ ಹೊಂದಿರುವ ಮಹೇಶಣ್ಣ ಆಗಾಗ ಕೆಲವೊಂದು ಕಾರ್ಯಕ್ರಮಗಳಲ್ಲಿ ಅವರನ್ನು ಭಾಗವಹಿಸುವಂತೆ ಮಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿರುತ್ತಾರೆ. ಹಿಂದುತ್ವ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.

ಮಹೇಶಣ್ಣ ಯಾವುದೇ ಕಾರ್ಯ ಆಗಬೇಕೆಂದು ಒಮ್ಮೆ ನಿರ್ಧಾರ ಮಾಡಿದರೆ ಅದು ಯಶಸ್ವಿ ಆಗುವವರೆಗೆ ವಿರಮಿಸಲಾರರು. ಅದೆಷ್ಟೇ ತೊಡಕು, ಸಮಸ್ಯೆ, ಸವಾಲು ಎದುರಾದರೂ ಅವೆಲ್ಲವನ್ನೂ ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಅವರಿಗಿದೆ. ಇದಕ್ಕೆ ಸಾಕ್ಷಿಯಾಗಿ ತೆಳ್ಳಾರಿನಲ್ಲಿ ಕೇವಲ 100 ದಿನಗಳಲ್ಲಿ ನಿರ್ಮಾಣವಾದ ಧ್ವಜಸ್ತಂಭ ಸಹಿತ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಡಿ ಆಲಡೆ ಕ್ಷೇತ್ರ ಕಲ್ಲೊಟ್ಟೆ ಜೀರ್ಣೋದ್ಧಾರಗೊಂಡಿದೆ.

ಸಂಬಳ ನೀಡಲು ಒಂದೂವರೆ ಕೋಟಿ
ಒಂದೂವರೆ ಕೋಟಿ ರೂ. ಗೂ ಅಧಿಕ ಮೊತ್ತ ಅವರಿಗೆ ತಿಂಗಳ ಸಂಬಳ ನೀಡಲು ಅಗತ್ಯವಿದೆ. ಇದು ಅವರ ಉದ್ಯಮದ ಸಾಧನೆಗೆ ಸಾಕ್ಷಿ. ದುಡಿಮೆಯ ಒಂದು ಪಾಲನ್ನು ತನ್ನೂರಿನ ಸಾಮಾಜಿಕ, ಧಾರ್ಮಿಕ ಕಾರ್ಯಕ್ಕೆ ವಿನಿಯೋಗಿಸುವ ಮಹೇಶಣ್ಣ ಕಾರ್ಕಳವಲ್ಲದೇ ಇತರ ತಾಲೂಕಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡುತ್ತ ಬಂದವರು. ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತಿನಂತೆ ದಾನದ ಬಗ್ಗೆ ಪ್ರಚಾರ ಬಯಸಿದವರಲ್ಲ.

ಪತ್ನಿ ಜಯಶ್ರೀ ಶೆಟ್ಟಿ, ಪುತ್ರ ನಿಶ್ಚಯ್ ಶೆಟ್ಟಿಯೊಂದಿಗೆ

ಅಸಂಖ್ಯಾತ ಯುವ ಜನತೆಯ ಕಣ್ಮಣಿ ಆಗಿರುವ ಮಹೇಶಣ್ಣ ಓರ್ವ ಸಹೃದಯಿ, ಮಾನವೀಯತೆಯ ಆಗರ, ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಅವರ ಜೀವನದ ಯಶೋಗಾಥೆ ನಮಗೆಲ್ಲರಿಗೂ ಮಾದರಿ, ಪ್ರೇರಣೆ. 50ರ ಸಾರ್ಥಕ ಸಂವತ್ಸರವನ್ನು ಪೂರೈಸಿರುವ ನಮ್ಮೂರಿನ ಅಭಿವೃದ್ಧಿಯ ಹರಿಕಾರನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.





























































































































error: Content is protected !!
Scroll to Top