ಕೌಟುಂಬಿಕ ವಿವಾದಗಳ ತನಿಖೆ ಕುರಿತು ವಿಶೇಷ ನ್ಯಾಯಾಲಯ

ಕುಟುಂಬದಲ್ಲಿ ಪತಿ ಪತ್ನಿಯರ ನಡುವೆ ಉಂಟಾಗುವ ಕೌಟುಂಬಿಕ ವಿವಾದಗಳು ಸಾಮಾನ್ಯವಾಗಿ ಭಾವನಾತ್ಮಕ ಸ್ವರೂಪದ್ದಾಗಿರುತ್ತದೆ. ಇಂತಹ ಕೌಟುಂಬಿಕ ವಿವಾದಗಳನ್ನು ವಿಶೇಷವಾದ ಮುತುವರ್ಜಿಯಿಂದ ಮತ್ತು ಶೀಘ್ರವಾಗಿ ಇತ್ಯರ್ಥಗೊಳಿಸಿ ಕುಟುಂಬದೊಳಗಿನ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರವು 1984ರಲ್ಲಿ “ಕೌಟುಂಬಿಕ ನ್ಯಾಯಾಲಯಗಳ ಅಧಿನಿಯಮ 1984” ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಕೌಟುಂಬಿಕ ವಿವಾದ ಅಂದರೆ ಪತಿ ಪತ್ನಿಯರ ನಡುವಿನ ವಿವಾದವನ್ನು ಕೌಟುಂಬಿಕ ನ್ಯಾಯಾಲಯ ಎಂಬ ವಿಶೇಷವಾದ ನ್ಯಾಯಾಲಯವನ್ನು ಪ್ರತಿಯೊಂದು ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುತ್ತದೆ.

ಪತಿ ಪತ್ನಿಯರೊಳಗಿನ ಯಾವುದೇ ರೀತಿಯ ವೈವಾಹಿಕ ವಿವಾದಗಳನ್ನು ಕಾನೂನು ಬದ್ಧವಾಗಿ ಬಗೆಹರಿಸುವ ಮತ್ತು ಸಂದರ್ಭಕ್ಕನುಸಾರವಾಗಿ ಹೊಂದಿದ ಪತಿ ಅಥವಾ ಪತ್ನಿಗೆ ಕಾನೂನು ರೀತಿಯ ಸೂಕ್ತ ಪರಿಹಾರವನ್ನು ನೀಡುವ ಉದ್ದೇಶಕ್ಕಾಗಿ ಅವರೊಳಗಿನ ವೈವಾಹಿಕ ಸಮಸ್ಯೆಗಳನ್ನು ಅವಲೋಕಿಸುವ, ನಿರ್ಲಕ್ಷಕ್ಕೊಳಪಟ್ಟ ನೊಂದಿತ ಪತ್ನಿಗೆ ಪತಿಯಿಂದ ಜೀವನಾಂಶದ (ಮಧ್ಯಂತರ ಮತ್ತು ಖಾಯಂ) ಪರಿಹಾರವನ್ನು ಕೊಡಿಸುವ, ಮಕ್ಕಳ ಅಭಿರಕ್ಷೆಗೆ (ಕಸ್ಟಡಿ) ಸಂಬಂಧಪಟ್ಟಂತೆ ವಿವಾಹಿತ ದಂಪತಿಗಳ ನಡುವಿನ ವಿವಾದವನ್ನು ಇತ್ಯರ್ಥಪಡಿಸಿ ಮಕ್ಕಳ ಹಿತಾಸಕ್ತಿಯನ್ನು ಕಾಪಾಡುವ, ತಮ್ಮೊಳಗಿನ ವಿವಾದ ಮತ್ತು ಭಿನ್ನಾಭಿಪ್ರಾಯಗಳಿಂದ ಪ್ರತ್ಯೇಕವಾಗಿ ವಾಸಮಾಡಿಕೊಂಡು ಬರುತ್ತಿರುವ ದಂಪತಿಗಳ ನಡುವಿನ ವಿವಾದವನ್ನು ಅವಲೋಕಿಸಿ ಅವರಿಬ್ಬರು ಒಂದಾಗಿ ತಮ್ಮ ವೈವಾಹಿಕ ಜೀವನವನ್ನು ಸಾಮರಸ್ಯದಿಂದ ಮುಂದುವರಿಸಿಕೊಂಡು ಹೋಗುವಂತೆ ಸೂಕ್ತ ಆದೇಶವನ್ನು ನೀಡುವ ಅಥವಾ ಯಾವುದೇ ಸಕಾರಣದಿಂದ ಪರಸ್ಪರ ಸಹಕಾರದಿಂದ ತಮ್ಮ ವೈವಾಹಿಕ ಜೀವನವನ್ನು ಮುಂದುವರಿಸಲು ಇಚ್ಚಿಸದ ಮತ್ತು ಈ ಬಗ್ಗೆ ಕಠಿಣ ನಿರ್ಧಾರ ಕೈಗೊಂಡ ದಂಪತಿಗಳ ವಿಚ್ಚೇಧನ ಕುರಿತಂತೆ ಸೂಕ್ತ ಆದೇಶ ಮಾಡುವ ಮತ್ತು ವಿವಾಹಿತ ದಂಪತಿಗಳ ಒಳಗಿನ ಆಸ್ತಿ ವಿವಾದವನ್ನು ಇತ್ಯರ್ಥಪಡಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಗಳ ವ್ಯಾಪ್ತಿಯೊಳಗಿರುತ್ತದೆ.

ಪತಿ ಪತ್ನಿಯರ ನಡುವಿನ ಯಾವುದೇ ಕ್ರಿಮಿನಲ್ ಅಂದರೆ ಅಪರಾಧಿಕ ಸ್ವರೂಪದ ವಿವಾದಗಳು ಅಥವಾ ವರದಕ್ಷಿಣೆ ಕಾಯಿದೆಯ ಮತ್ತು ಭಾರತೀಯ ನ್ಯಾಯ ಸಂಹಿತ 2023 ಕಾನೂನಿನ ಪ್ರಕಾರದ ಅಪರಾಧಿತ ಸ್ವರೂಪದ ಪ್ರಕರಣಗಳನ್ನು ತನಿಖೆ ನಡೆಸಿ ಇತ್ಯರ್ಥಗೊಳಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯದ ವ್ಯಾಪ್ತಿಯೊಳಗೆ ಇರುವುದಿಲ್ಲ. ಕೌಟುಂಬಿಕ ನ್ಯಾಯಾಲಯಗಳಲ್ಲಿ ಕೆಲವು ಸಂದರ್ಭಗಳಲ್ಲಿ ಅನೌಪಚಾರಿಕ ಮಾತುಕತೆ ಅಥವಾ ಸಂಧಾನಗಳ ಮೂಲಕ ವಿವಾಹಿತ ದಂಪತಿಗಳ ಒಳಗಿನ ವಿವಾದಗಳನ್ನು ಬಗೆಹರಿಸಿ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಸೂಕ್ತ ನ್ಯಾಯವನ್ನು ಕೊಡಿಸುವುದು ಕೌಟುಂಬಿಕ ನ್ಯಾಯಾಲಯದ ವ್ಯವಸ್ಥೆಯ ಮೂಲ ಉದ್ದೇಶವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅಥವಾ ಅಪರ ಜಿಲ್ಲಾ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿರುತ್ತಾರೆ. ಈ ನ್ಯಾಯಾಲಯದ ವಿಶೇಷತೆ ಏನೆಂದರೆ ಪ್ರಾಥಮಿಕ ಹಂತದಲ್ಲಿ ಪತಿ ಪತ್ನಿಯರು ತಮ್ಮೊಳಗಿನ ವಿವಾದವನ್ನು ಬಗೆಹರಿಸಿಕೊಳ್ಳಲು ಮತ್ತು ಸೂಕ್ತ ಪರಿಹಾರವನ್ನು ಪಡೆಯಲು ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ. ಆದರೆ ಈ ನ್ಯಾಯಾಲಯವನ್ನು ಸಂಪರ್ಕಿಸುವ ಪತಿ ಅಥವಾ ಪತ್ನಿ ತಮ್ಮ ಅಹವಾಲನ್ನು ವಕೀಲರ ಸಹಾಯವಿಲ್ಲದೆ ನೇರವಾಗಿ ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳುವಲ್ಲಿ ಅಸಹಾಯಕರಾದಲ್ಲಿ ಪ್ರಕರಣದ ಪಕ್ಷಗಾರರ ಲಿಖಿತ ವಿನಂತಿ ಮೇರೆಗೆ ಕೌಟುಂಬಿಕ ನ್ಯಾಯಾಲಯವು ಅವರಿಗೆ ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಸೂಕ್ತ ಅನುಮತಿಯನ್ನು ನೀಡಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಸೂಕ್ತ ಕಾರಣಕ್ಕಾಗಿ ಪತಿ ಪತ್ನಿಯರ ಒಳಗಿನ ವೈವಾಹಿಕ ವಿವಾದದ ಸಂಬಂಧದ ವಿಚಾರಣೆಯನ್ನು ಗೌಪ್ಯವಾಗಿ ನಡೆಸುವ ಅಗತ್ಯ ಇದೆ ಎಂದು ಪಕ್ಷಗಾರರ ಪೈಕಿ ಯಾರೊಬ್ಬರಾದರೂ ನ್ಯಾಯಾಲಯವನ್ನು ವಿನಂತಿಸಿಕೊಂಡಲ್ಲಿ ಅಥವಾ ನ್ಯಾಯಾಲಯವು ಸ್ವತಹ ಭಾವಿಸಿದಲ್ಲಿ ಕೌಟುಂಬಿಕ ವಿವಾದದ ವಿಚಾರಣೆಯನ್ನು ನ್ಯಾಯಾಲಯವು ಗೌಪ್ಯವಾಗಿ (ಇನ್ ಕ್ಯಾಮರಾ ಪ್ರೊಸೀಡಿಂಗ್ಸ್ ಪ್ರಕಾರ) ನಡೆಸಿ ವಿವಾದವನ್ನು ನಿರ್ಧರಿಸಬಹುದಾಗಿದೆ.

















































































error: Content is protected !!
Scroll to Top