ಕಾರ್ಕಳ : ಚಾರ ಮೇಲ್ಬೆಟ್ಟು ಇಲ್ಲಿನ ನೂತನ ಶಿಲಾಮಯ ಶ್ರೀ ಬ್ರಹ್ಮ ಬೈದರ್ಕಳ ಶಿವರಾಯ ಗರಡಿಯ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಎ. 1ರಿಂದ ಎ. 9 ರವರೆಗೆ ಜರುಗಲಿದೆ. ಮಾ. 2ರಂದು ಗರಡಿಯ ಆವರಣದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ತುಳುನಾಡಿನಲ್ಲಿ ಹುಟ್ಟಿ ಬೆಳೆದು ಅನ್ಯಾಯದ ವಿರುದ್ಧ ಹೋರಾಡಿ ತಮ್ಮ ಕಾರ್ಯಸಾಧನೆಯಿಂದ ದೈವತ್ವಕ್ಕೆ ಏರಿದವರು ಕೋಟಿ ಚೆನ್ನಯರು. ಅಂತಹ ಅವಳಿ ವೀರರ ಸಾಧನೆಯ ಪ್ರತೀಕವಾಗಿ ಹಾಗೂ ದೈವ ಬಲ ಮತ್ತು ಮನೋಬಲ ವೃದ್ಧಿಗೊಳ್ಳುವುದಕ್ಕಾಗಿ ಅಂದು ಸ್ಥಾಪಿಸಿದ 66 ಮೂಲ ಗರಡಿಯಲ್ಲಿ ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಶಿವರಾಯ ಗರಡಿಯು ಒಂದು ಎಂದು ಪ್ರಚಲಿತದಲ್ಲಿದೆ. 475 ವರ್ಷಗಳ ಇತಿಹಾಸವಿರುವ ಗರಡಿಯು ಊರ ಭಕ್ತ ಜನತೆ ಮತ್ತು ದಾನಿಗಳ ಸಹಾಯದದಿಂದ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶಕ್ಕೆ ಸಜ್ಜಾಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗೋಣ ಎಂದ ಅವರು ಬ್ರಹ್ಮಕಲಶೋತ್ಸವ ಕುರಿತಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರೋಡಿ ಮೇಲ್ಬೆಟ್ಟು ಚಾರ ಇದರ ಅನುವಂಶಿಕ ಆಡಳಿತ ಮೊಕ್ತೇಸರ ಸುರೇಶ್ ಹೆಗ್ಡೆ, ಪ್ರಚಾರ ಮತ್ತು ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ ಚಾರ, ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಸೂಡ ಕೆರೆಬೆಟ್ಟು, ಸೀತಾರಾಮ ಹೆಗ್ಡೆ ಮಂಡಾಡಿ, ರವಿ ಪೂಜಾರಿ ಸಂತೆಕಟ್ಟೆ, ಜಯಕರ ಹೆಗ್ಡೆ, ಪ್ರಕಾಶ್ ಶೆಟ್ಟಿ, ವಿಕ್ರಮ್ ನಾಯಕ್, ಮಂಡಾಡಿಜೆಡ್ಡು, ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದ ವಿವರ
ಎ. 1ರಂದು ಮಧ್ಯಾಹ್ನ 2.30ಕ್ಕೆ ಹೊರೆಕಾಣಿಕೆ ಮೆರವಣಿಗೆ ಚಾರ ಲಯನ್ಸ್ ಸರ್ಕಲ್ ನಂದ ಮುಂಡಾಡಿ ಜಡ್ಡು ತಲುಪಿ, ಭಜನೆ, ವಾದ್ಯ, ಕೊಂಬು, ಚಂಡೆಗಳೊಂದಿಗೆ ಗರಡಿಗೆ ತಲುಪುವುದು. ಎ. 2ರಂದು ಗರಡಿಯಲ್ಲಿ ಗಣಹೋಮ, ಉಗ್ರಾಣ ಮೂಹೂರ್ತ, ಪ್ರಕಾರಬಲಿ, ವಾಸ್ತುಪೂಜೆ, ದೇವತಾ ಪ್ರಾರ್ಥನೆಯೊಂದಿಗೆ ಗರಡಿಯ ಕಾಮಗಾರಿಯಲ್ಲಿ ತೊಡಗಿಸಿಕೊಂಡವರಿಗೆ ಗೌರವ ಸಮರ್ಪಣೆ. ಎ. 3ರಂದು ಬಿಂಬಪ್ರತಿಷ್ಠೆ, ದೈವಗಳ ಪ್ರತಿಷ್ಠಾ ಕಾರ್ಯಕ್ರಮ, ಧಾರ್ಮಿಕ ಸಭೆ, ದಾನಿಗಳಗೆ ಸನ್ಮಾನ, ಸಂಜೆ ಸುದರ್ಶನ ಹೋಮ, ನವೋತ್ತರ ಶತ ಕಲಶದ ಮಂಡಳ ರಚನೆ, ಶಿವರಾಯಗೆ ಪಂಚವಿಂಶತಿ ಕಲಶದ ಮಂಡಲ ರಚನೆ ನಡೆಯುವುದು. ಎ. 4ರಂದು ಬ್ರಹ್ಮಕಲಶವು ಮಹಾ ಕುಂಭ ತೀರ್ಥದೊಂದಿಗೆ ಅಭಿಷೇಕಗೊಳ್ಳಲಿದ್ದು, ದೈವಗಳ ದರ್ಶನದ ಬಳಕ ಧಾರ್ಮಿಕ ಸಭೆ ಮತ್ತು ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಹಣ ನೀಡಿದ ದಾನಿಗಳಿಗೆ ಹಾಗೂ ವಸ್ತುರೂಪದಲ್ಲಿ ಸಹಕರಿಸಿದವರಿಗೆ ಸನ್ಮಾನ ನಡೆಯಲಿರುವುದು.
ಎ. 8 ರಂದು ಸಂಜೆ ಶಿವರಾಯ ಕೋಲ, ಬೈದರ್ಕಳ ದರ್ಶನ, ಬೈದರ್ಕಳ ಮತ್ತು ಧೂಮಾವತಿಯ ಮುಖಾ-ಮುಖಿ, ಎ. 9ರಂದು ಸಂಜೆ ಮಾಯಂದಲಮ್ಮ ಕೋಲ, ಜುಮಾದಿ ಕೋಲ ನಡೆಯಲಿದ್ದು, ಎ. 3ರಿಂದ ಪ್ರತಿ ದಿನ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಸ್ವಾಮೀಜಿಗಳ ಆಶೀರ್ವಚನ, ಕ್ಷೇತ್ರದ ಶಾಸಕರೊಂದಿಗೆ ವಿವಿಧ ಕ್ಷೇತ್ರ ಶಾಸಕರು, ಸಂಸದರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು, ಪಾಲ್ಗೊಳ್ಳಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿರಸಮಂಜರಿ, ಗಾನಸುಧಾ, ನೃತ್ಯವೈವಿಧ್ಯ, ಭಕ್ತಿಗೀತೆ ಗಾಯನ, ಶಿವಧೂತೆ ಗುಳಿಗ ನಾಟಕ, ಭಜನೆ ಕಾರ್ಯಕ್ರಮ, ಕೋಟಿ ಚೆನ್ನಯ ಯಕ್ಷಗಾನ ಹಿರಿಯಡ್ಕ ಯಕ್ಷಗಾನ ಮಂಡಳಿಯಿಂದ ನಡೆಯಲಿದೆ.






























































