ಉತ್ತರ ಪ್ರದೇಶ : ಮಾಘ ಪೂರ್ಣಿಮೆ ಹಿನ್ನೆಲೆ ಮಹಾಕುಂಭ ಮೇಳದಲ್ಲಿ ಬುಧವಾರ ಪುಣ್ಯ ಸ್ನಾನ ನಡೆಯುತ್ತಿದ್ದು, ಬೆಳಿಗ್ಗೆ 6 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ 73 ಲಕ್ಷಕ್ಕೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಬೆಳಗಿನ ಜಾವದಿಂದಲೇ ಪುಣ್ಯ ಸ್ನಾನ ಆರಂಭವಾಗಿದ್ದು, ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿರುವ ವಾರ್ ರೂಮ್‌ನಲ್ಲಿ ಬೆಳಿಗ್ಗೆ 4 ಗಂಟೆಯಿಂದ ಮಾಘ ಪೂರ್ಣಿಮಾ ಸ್ನಾನವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಮತ್ತು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಕೂಡ ವಾರ್ ರೂಮ್‌ನಲ್ಲಿ ಮುಖ್ಯಮಂತ್ರಿಗಳಿಗ ಸಾಥ್ ನೀಡಿದ್ದಾರೆ.
ಕುಂಭ ಮೇಳದ ಒಟ್ಟು 6 ಪುಣ್ಯ ಸ್ನಾನಗಳ ಪೈಕಿ ಮಾಘಿ ಪೂರ್ಣಿಮೆಯಂದು ನಡೆಯುವ ಪುಣ್ಯ ಸ್ನಾನ 5ನೆಯದ್ದಾಗಿದೆ. 6ನೇ ಪುಣ್ಯಸ್ನಾನ ಫೆ. 26ರ ಮಹಾಶಿವರಾತ್ರಿಯಂದು ನಡೆಯಲಿದೆ. ತ್ರಿವೇಣಿ ಸಂಗಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉತ್ತರಪ್ರದೇಶ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ಕುಂಭ ಸ್ಥಳವನ್ನು ವಾಹನ ರಹಿತ ವಲಯ ಎಂದು ಘೋಷಣೆ ಮಾಡಿದ್ದು, ಸಂಜೆ 5ರಿಂದ ನಿಯಮ ಜಾರಿಯಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರುವುದಾಗಿ ಸರ್ಕಾರ ತಿಳಿಸಿದೆ.































































