ದೇಶಕ್ಕಾಗಿ ಸದಾ ಮಿಡಿದ ಹೃದಯವಂತ ರತನ್‌ ಟಾಟಾ

ಈ ಜಗತ್ತು ತನ್ನ ಅವಶ್ಯಕತೆಗಳಿಗೆ ಅನುಸಾರವಾಗಿ ಸಾಗುತ್ತದೆ. “ಚಳಿಗಾಲದಲ್ಲಿ ಯಾವ ಸೂರ್ಯನಿಗೆ ಅಷ್ಟೊಂದು ಬೇಡಿಕೆ ಇರುವುದೋ ಅದೇ ಸೂರ್ಯನನ್ನು ಬೇಸಿಗೆಯಲ್ಲಿ ಜನ ಶಪಿಸುತ್ತಾರೆ. ನಿಮ್ಮ ಬೆಲೆಯು ಅಷ್ಟೇ, ಎಲ್ಲಿಯವರೆಗೆ ಜನಕ್ಕೆ ನಿಮ್ಮ ಅಗತ್ಯ ಇದೆಯೋ ಅಲ್ಲಿಯವರೆಗೆ ಮಾತ್ರ.”

ಇದು ರತನ್ ಟಾಟಾ ಎಂಬ ಕೊಹಿನೂರು ರತ್ನ ಹೇಳಿದ ಸಾಲುಗಳು. ಅವರು ಕೇವಲ ಪ್ರತಿಷ್ಠಿತ ಬ್ಯುಸಿನೆಸ್ ಐಕಾನ್ ಮಾತ್ರ ಆಗಿರುತ್ತಿದ್ದರೆ ದೇಶ ಈ ಪರಿಯಾಗಿ ದುಃಖಿಸುತ್ತಿರಲಿಲ್ಲ, ಶೋಕಸಾಗರದಲ್ಲಿ ಮುಳುಗುತ್ತಿರಲಿಲ್ಲ. ದೇಶಕ್ಕೆ 86 ವರ್ಷದ ಈ ಹಿರಿಯನ ನಿಧನ ಇಷ್ಟೊಂದು ನಷ್ಟ ಎನಿಸುತ್ತಿರಲಿಲ್ಲ. ಆದರೆ, ಬಿಸಿನೆಸ್ ಮೈಂಡ್‌ಸೆಟ್ ಮತ್ತು ಭಾವನಾತ್ಮಕ ಮನಃಸ್ಥಿತಿ ಎರಡನ್ನೂ ಸಮವಾಗಿ ಇಟ್ಟುಕೊಂಡ ಅಸಾಮಾನ್ಯ ವ್ಯಕ್ತಿತ್ವದ ಮನುಷ್ಯ ರತನ್.

ಒಂದು ಕಡೆ ಟಾಟಾ ಕಬ್ಬಿಣ, ಸಿಮೆಂಟ್ ಈ ತರದ ಬ್ಯ್ರಾಂಡ್‌ಗಳು ಬಂದರೆ ಇನ್ನೊಂದೆಡೆ ಟಾಟಾ ಕಾಫಿ, ಟಾಟಾ ಉಪ್ಪು, ಲಕ್ಸುರಿ ಕಾರ್, ಭರವಸೆಯ ಷೇರ್ ಹೀಗೆ ರತನ್ ಟಾಟಾ ಭಾರತವನ್ನು ಬೃಹದಾಕಾರದಲ್ಲಿ ಬೆಳೆಸುತ್ತಲೇ ಹೋಗುತ್ತಾರೆ. ಬಡ ಜಗತ್ತು ಕ್ಯಾನ್ಸರ್ ರೋಗದ ವಿರುದ್ಧ ಕನಿಷ್ಠ ಹೋರಾಡುವ ಬಲವನ್ನು ತೋರಿಸಲು ಸಾಧ್ಯವಾಗದ ಸ್ಥಿತಿ ಇರುವಾಗ ಅಷ್ಟೊಂದು ಬೃಹತ್ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲು ರತನ್ ಟಾಟಾ ಅವರಲ್ಲದೇ ಇನ್ಯಾರಿಗೆ ಸಾಧ್ಯವಾದೀತು?

ಬರಡು ನೆಲದಲ್ಲಿ ನೀರು ತರಿಸಿದ ಭಗೀರಥರ, ಕರಾವಳಿಯಲ್ಲಿ ಬದುಕು ನಿರ್ಮಿಸಿ ಕೊಟ್ಟ ಪರಶುರಾಮರ ಸಾಧನೆಯನ್ನು ಇಲ್ಲೇ ಹಣವನ್ನು ಸೃಷ್ಟಿಸಿ, ಇಲ್ಲೇ ಹೂಡಿಕೆ ಮಾಡಿ, ಇಡೀ ದೇಶವನ್ನೇ ಆರ್ಥಿಕವಾಗಿ ಮುನ್ನೆಡೆಸಿದ ವ್ಯಕ್ತಿಯ ಮುಂದಾಲೋಚನೆಯ ವಿಚಾರಧಾರೆಗೆ ಹೋಲಿಕೆ ಮಾಡಿದರೆ ಅತಿಶಯವಲ್ಲ.

ಅಂದು ಭಾರತದ ಮನಸ್ಥಿತಿ ಮತ್ತು ಪರಿಸ್ಥಿಯ ಅವಲೋಕನ ಮಾಡಿದರೆ ಅವರು ಎಂತಹ ರಿಸ್ಕ್ ತೆಗೆದುಕೊಂಡಿದ್ದರು ಎಂಬ ಅರಿವು ಮೂಡುತ್ತದೆ. ತುಸು ಓದಿಕೊಂಡವರು, ನೇತಾರರು, ಬುದ್ಧಿವಂತರು ಎನಿಸಿಕೊಂಡವರೆಲ್ಲ ವಿದೇಶದ ಭಜನೆ ಮಾಡುತ್ತಿದ್ದರು.
ಜಾಗತಿಕವಾಗಿ ಭಾರತ ಬರ್ಬಾದಾಗಿದೆ ಎಂಬುದನ್ನು ತಾವೇ ಡಂಗೂರ ಬಾರಿಸಿ ಪ್ರಚಾರ ಮಾಡಿಕೊಂಡು ಆ ನೆಲದಲ್ಲಿ ನೆಲೆ ಊರಲು ಹಾತೊರೆಯುತ್ತಿದ್ದರು. ಇಂತಹ ಸಮಯದಲ್ಲಿಯೂ ಪ್ರತಿಷ್ಠಿತ ಜೆಮ್‌ಶೆಡ್‌ಜೀ ಟಾಟಾ ಅವರ ಮರಿ ಮೊಮ್ಮಗ, ಹಿತ್ತಲ ಗಿಡದಲ್ಲಿಯೇ ಮದ್ದು ಹುಡುಕಿದವರು. ವಿದೇಶವನ್ನು ಅಲ್ಲಿನ ಸಂಸ್ಕೃತಿಯನ್ನು ವೈಭವೀಕರಿಸುವ ಎಲ್ಲ ಸೀಮೆಯನ್ನು ದಾಟಿ ಭಾರತಕ್ಕೆ ಹೊಸ ವ್ಯವಹಾರಿಕ ದೃಷ್ಟಿ ನೀಡಿದವರು. ಭಾರತದ ಬೇರಿಗೆ ಅಂಟಿದ ಯುವಕರಿಗೆ ಉದ್ಯೋಗದ ಭದ್ರತೆ ನೀಡಿ ಗಟ್ಟಿಗೊಳಿಸಿದವರು.

“ಜನರು ನಿಮ್ಮೆಡೆ ಕಲ್ಲು ಎಸೆಯುತ್ತಾರೆ ಎಂದರೆ ಅದನ್ನು ಜತನದಿಂದ ಎತ್ತಿಟ್ಟುಕೊಳ್ಳಿ ಮತ್ತು ಆ ಕಲ್ಲಿನಿಂದ ಏನು ಉಪಯೋಗ ಪಡೆಯಬಹುದು ಎಂದು ಯೋಚಿಸಿ” ಎಂದು ಹೇಳುವ ಅವರ ಯೋಚನೆಗೆ ಯಶಸ್ಸು ತಲೆಬಾಗದೆ ಇರಲು ಹೇಗೆ ಸಾಧ್ಯ? ಅವರ ಸಾಧನೆ, ಕಂಪನಿಗಳು, ಬಾಲ್ಯ, ಮದುವೆ, ಇತ್ಯಾದಿ ಮಾಹಿತಿಗಳು ಎಲ್ಲ ಜಾಲತಾಣಗಳಲ್ಲಿ ಸಿಗಬಹುದು. ಆದರೆ ಆಕಾಶವನ್ನು ಮುಟ್ಟಿದ ಕೈಗಳನ್ನು ಹೊಂದಿದ ವ್ಯಕ್ತಿಯ ಕಾಲುಗಳು ತಾಯಿ ನಾಡಿನಲ್ಲಿ ಹೇಗೆ ಭದ್ರವಾಗಿ ನೆಲೆಯೂರಿದ್ದವು ಎಂಬುದನ್ನು ಇಂದಿನ ಯುವ ಜನತೆ ಗ್ರಹಿಸಬೇಕು.

“ವೇಗವಾಗಿ ಸಾಗಬೇಕಾದರೆ ಒಬ್ಬನೇ ಹೋಗು. ದೂರ ಹೋಗಬೇಕಾದರೆ ಎಲ್ಲರ ಜೊತೆ ಹೋಗು” ಎನ್ನುವ ಅವರ ನುಡಿಯಂತೆ ದೇಶದ ಎಲ್ಲರನ್ನೂ ಸೇರಿಸಿಕೊಂಡು ಸಾಗಿದ ಅವರ 86 ವರ್ಷದ ದೀರ್ಘ ನಡಿಗೆಗೆ ಟಾಟಾ ವಿದಾಯ ಹೇಳಿದ್ದಾರೆ. ಈಗ ಒಬ್ಬರೇ ವೇಗವಾಗಿ ಹೋಗಿ ವೇಗವಾಗಿ ಮತ್ತೊಮ್ಮೆ ಇದೇ ನೆಲಕ್ಕೆ ಅಷ್ಟೇ ವೇಗವಾಗಿ ಬನ್ನಿ ಎಂಬುದಷ್ಟೇ ನಮ್ಮ ಹಾರೈಕೆ.





























































































































error: Content is protected !!
Scroll to Top