ಖಾಸಗಿ ಪ್ರತಿರಕ್ಷೆಯ ಅಧಿಕಾರ

ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 34 ರಿಂದ 44 ಪ್ರತಿಯೊಬ್ಬ ವ್ಯಕ್ತಿ ಹೊಂದಿರುವ ತನ್ನ ಖಾಸಗಿ ಪ್ರತಿರಕ್ಷೆಯ (ಸೆಲ್ಫ್ ಡಿಫೆನ್ಸ್) ಅಧಿಕಾರವನ್ನು ವಿವರಿಸುತ್ತದೆ. ಯಾವುದೇ ಅಪರಾಧ ಕೃತ್ಯದ ಹಿನ್ನಲೆಯನ್ನು ಮತ್ತು ತೀವ್ರತೆಯನ್ನು ಪರಿಗಣಿಸುವ ಸಂದರ್ಭದಲ್ಲಿ ಅಪರಾಧ ನಡೆಸಿರುವ ವ್ಯಕ್ತಿಯ ಉದ್ದೇಶವು ಬಹಳ ಮುಖ್ಯವಾಗಿರುತ್ತದೆ. ಯಾವುದೇ ದುರುದ್ದೇಶ ಹೊಂದಿರದೆ ತನ್ನ ಖಾಸಗಿ ಪ್ರತಿರಕ್ಷೆಯ ಸದುದ್ದೇಶದಿಂದ ಒಬ್ಬ ವ್ಯಕ್ತಿ ಮಾಡಿರುವ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಭಾರತೀಯ ನ್ಯಾಯ ಸಂಹಿತೆ 2023ರ 37ರ ಕಲಂನಲ್ಲಿ ಒಳಗೊಂಡಿರುವ ಕೆಲವು ನಿರ್ಬಂಧಗಳಿಗೆ ಒಳಪಟ್ಟು ತನ್ನ ದೇಹವನ್ನು ಅಥವಾ ಇತರ ಯಾರೇ ವ್ಯಕ್ತಿಯ ದೇಹವನ್ನು ಮಾನವ ದೇಹಕ್ಕೆ ಬಾಧಕವಾಗುವ ಯಾವುದೇ ಅಪರಾಧ ಆಗದಂತೆ, ತನ್ನ ಅಥವಾ ಇತರ ಯಾರೇ ವ್ಯಕ್ತಿಯ ಸ್ವತ್ತನ್ನು ಅದು ಚರ ಸ್ವತ್ತಾಗಿರಲಿ ಅಥವಾ ಸ್ಥಿರ ಸ್ವತ್ತಾಗಿರಲಿ ಕಳ್ಳತನ, ಸುಲಿಗೆ, ಕೇಡು ಅಥವಾ ಅಪರಾಧಿಕ ಅತಿಕ್ರಮಣ ಪ್ರವೇಶದ ಪರಿಭಾಷೆಗೆ ಒಳಪಡುವ ಅಪರಾಧವಾಗುವಂಥ ಆ ಯಾವುದೇ ಕೃತ್ಯವಾಗದಂತೆ ಅಥವಾ ಯಾವ ಕೃತ್ಯವು ಕಳವು ಮಾಡಲು, ಸುಲಿಗೆ ಮಾಡಲು, ಕೇಡುಂಟು ಮಾಡಲು ಅಥವಾ ಅಪರಾಧಿಕ ಅತಿಕ್ರಮಣ ಪ್ರವೇಶ ಮಾಡಲು ಮಾಡಿದ ಪ್ರಯತ್ನವೆನಿಸುತ್ತದೋ ಆ ಯಾವುದೇ ಕೃತ್ಯ ಆಗದಂತೆ ತನ್ನ ದೇಹ ಮತ್ತು ಸ್ವತ್ತಿನ ರಕ್ಷಣೆ ಬಗ್ಗೆ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಹೊಂದಿರುತ್ತಾನೆ.

ಅದೇ ರೀತಿಯಾಗಿ ಅಸ್ವಸ್ಥ ಮನಸ್ಸಿನ ವ್ಯಕ್ತಿ ಮುಂತಾದವರಿಂದಾದ ಕೃತ್ಯದ ವಿರುದ್ಧ ಅಂದರೆ ಕೃತ್ಯವನ್ನು ಮಾಡುವ ವ್ಯಕ್ತಿ ಹುಡುಗುತನ, ಪರಿಪಕ್ವ ಅರಿವಿನ ಅಭಾವ, ಅಸ್ವಸ್ಥ ಮನಸ್ಸು ಅಥವಾ ಅಮಲಿನ ಕಾರಣದಿಂದ ಕೃತ್ಯವನ್ನು ಎಸಗುವ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ನಡೆಸುವ ಕೃತ್ಯವು ಆತನ ಖಾಸಗಿ ಪ್ರತಿರಕ್ಷೆಯ ಅಧಿಕಾರದ ವ್ಯಾಪ್ತಿಯೊಳಗೆ ಬರುತ್ತದೆ. ಆದರೆ ತನ್ನ ಕರ್ತವ್ಯದ ಅಧಿಕಾರದ ಸ್ಥಾನದ ನಿಮಿತ್ತ ಒಬ್ಬ ಸಾರ್ವಜನಿಕ ನೌಕರನು ಸದ್ಭಾವನೆಯಿಂದ ಕಾರ್ಯನಿರ್ವಹಿಸುತ್ತಿರುವ, ನಿರ್ವಹಿಸಲು ಮಾಡಿದ ಅಥವಾ ಮಾಡಲು ಪ್ರಯತ್ನಿಸಿದ ಯಾವುದೇ ಕೃತ್ಯವು ಅದು ಕಾನೂನಿನ ಮೂಲಕ ಕಟ್ಟುನಿಟ್ಟಾಗಿ ಸಮರ್ಥನೀಯವಲ್ಲದಿದ್ದರೂ, ಸಂಬಂಧಪಟ್ಟ ವ್ಯಕ್ತಿಗೆ ಅದು ಮರಣದ ಅಥವಾ ತೀವ್ರ ಗಾಯದ ಭಯವನ್ನು ಸಕಾರಣವಾಗಿ ಉಂಟುಮಾಡದಿದ್ದರೆ ಆ ಕೃತ್ಯದ ಬಗ್ಗೆ ಖಾಸಗಿ ಪ್ರತಿರಕ್ಷೆಯ ಅಧಿಕಾರ ವ್ಯಾಪ್ತಿಯೊಳಗೆ ಬರುವುದಿಲ್ಲ.

ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ ಪ್ರತಿರಕ್ಷಣೆಗಾಗಿ ಕೆಲವು ನಿರ್ಬಂಧಗಳಿಗೆ ಒಳಪಟ್ಟು ಹಲ್ಲೆ ನಡೆಸುವ ವ್ಯಕ್ತಿಯನ್ನು ಹಲ್ಲೆ ನಡೆಸದಂತೆ ಮಾಡುವ ಕೃತ್ಯ ಮಾತ್ರ ಖಾಸಗಿ ಪ್ರತಿರಕ್ಷೆಯ ಅಧಿಕಾರ ವ್ಯಾಪ್ತಿಯೊಳಗೆ ಬರುತ್ತದೆ ವಿನಹ ಹಲ್ಲೆ ನಡೆಸುವ ವ್ಯಕ್ತಿಯ ಜೀವಕ್ಕೆ ಹಾನಿ ಉಂಟುಮಾಡಿ ಆತನ ಮರಣಕ್ಕೆ ಕಾರಣ ಉಂಟಾಗುವ ಕೃತ್ಯವು ಪ್ರತಿರಕ್ಷೆಯ ಅಧಿಕಾರ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಅಪರಾಧವನ್ನು ಮಾಡಿರದಿದ್ದರೂ ಅಪರಾಧವನ್ನು ಮಾಡುವ ಪ್ರಯತ್ನದಿಂದ ಅಥವಾ ಬೆದರಿಕೆಯಿಂದ ದೇಹಕ್ಕೆ ಅಪಾಯವುಂಟಾಗುವ ಸಮಂಜಸ ಭಯವು ಉದ್ಭವಿಸಿದೊಡನೆಯೇ ದೇಹದ ಖಾಸಗಿ ರಕ್ಷಣೆಗಾಗಿ ಇರುವ ಖಾಸಗಿ ಪ್ರತಿರಕ್ಷೆಯ ಅಧಿಕಾರವು ಪ್ರಾರಂಭವಾಗುತ್ತದೆ ಮತ್ತು ದೇಹಕ್ಕೆ ಅಂಥ ಅಪಾಯದ ಭಯವು ಮುಂದುವರೆಯುವವರೆಗೆ ಅದೂ ಸಹ ಮುಂದುವರೆಯುತ್ತದೆ. ಸ್ವತ್ತಿನ ರಕ್ಷಣೆಗಾಗಿ ಇರುವ ಖಾಸಗಿ ಪ್ರತಿರಕ್ಷೆಯ ಅಧಿಕಾರವು ಮೇಲ್ಕಾಣಿಸಿದ ಕಾನೂನಿನ ಕಲಂ 37ರ ಪ್ರಕರಣದಲ್ಲಿ ನಮೂದಿಸಿರುವ ನಿರ್ಬಂಧಗಳಿಗೆ ಒಳಪಟ್ಟು ಸುಲಿಗೆ/ದರೋಡೆ, ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮುಂಚೆ ಮನೆಗೆ ಕನ್ನ ಹಾಕುವುದು, ಯಾವ ಕಟ್ಟಡವನ್ನು, ಡೇರೆಯನ್ನು ಅಥವಾ ನೌಕೆಯನ್ನು ಮನುಷ್ಯನ ವಾಸಕ್ಕಾಗಿ ಅಥವಾ ಸ್ವತ್ತಿನ ಅಭಿರಕ್ಷೆಯ ಸ್ಥಳವಾಗಿ ಬಳಸಲಾಗುತ್ತದೆಯೋ ಆ ಯಾವುದೇ ಕಟ್ಟಡಕ್ಕೆ, ಡೇರೆಗೆ ಅಥವಾ ನೌಕೆಗೆ ಬೆಂಕಿ ಹಾಕುವ ಅಥವಾ ಯಾವುದೇ ಆಸ್ಫೋಟಕ ವಸ್ತುವನ್ನು ಅದರ ಮೇಲೆ ಎಸೆಯುವ ಕುಚೇಷ್ಟೆ, ಕಳವಿನ ಅಥವಾ ಮನೆ-ಅತಿಕ್ರಮಣ ಪ್ರವೇಶ ಮಾಡುವ ಸಂದರ್ಭಗಳಲ್ಲಿ ಒಂದು ವೇಳೆ ಖಾಸಗಿ ಪ್ರತಿರಕ್ಷೆಯ ಅಧಿಕಾರವನ್ನು ಚಲಾಯಿಸದಿದ್ದರೆ ಆ ಸಂದರ್ಭದಲ್ಲಿ ತಾನು ತನ್ನ ಮರಣಕ್ಕೆ ಅಥವಾ ಮಾರಣಾಂತಿಕ ಹಲ್ಲೆಗೆ ಒಳಗಾಗುವ
ಸಂದರ್ಭದಲ್ಲಿ ಅಂತಹ ಅಪರಾಧವನ್ನು ಎದುರಿಸುವ ವ್ಯಕ್ತಿಯ ಖಾಸಗಿ ಪ್ರತಿರಕ್ಷೆಯ ಅಧಿಕಾರವು ಸಂದಂರ್ಭಕ್ಕನುಸಾರವಾಗಿ ಕೃತ್ಯ ನಡೆಸುವ ವ್ಯಕ್ತಿಯ ಜೀವಕ್ಕೆ ಹಾನಿ ಉಂಟುಮಾಡುವರೆಗಿನ ವ್ಯಾಪ್ತಿಯೊಳಗೆ ಬರುತ್ತದೆ.















































error: Content is protected !!
Scroll to Top