ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ – 10 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ : ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದಿ. ಡಾ. ಉದಯ್ ಕುಮಾರ್ ಹೆಗ್ಡೆ ವೇದಿಕೆಯಲ್ಲಿ ನಡೆಯಿತು.
ಶಾಸಕ ವಿ. ಸುನಿಲ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಮ್ಮನ ನೆರವು ಇಲ್ಲದೆ ನಾವ್ಯಾರು ಬದುಕಲು ಸಾಧ್ಯವಿಲ್ಲ. ಅವಿನಾಶ್ ಶೆಟ್ಟಿಯವರು ಅಮ್ಮನ ನೆನಪಲ್ಲಿ ಟ್ರಸ್ಟ್‌ ಪ್ರಾರಂಭಿಸಿ ತನ್ಮೂಲಕ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಬ್ಯಾಗ್‌, ವಿದ್ಯಾರ್ಥಿ ವೇತನ ವಿತರಣೆಯಂತಹ ಸಮಾಜಮುಖಿ ಕಾರ್ಯಕಚಟುವಟಿಕೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಅವರ ಶಿಕ್ಷಣ ಪ್ರೇಮ ಸಮಾಜಕ್ಕೆ ಮಾದರಿ ಎಂದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಗಣರಾಜ್ ಶೆಟ್ಟಿ ಮಾತನಾಡಿ, ಶಿಕ್ಷಣ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ಕಲಿತ ಶಿಕ್ಷಣದಿಂದ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವುದು ಮುಖ್ಯ ಎಂದ ಅವರು ಮುಂದಿನ ದಿನಗಳಲ್ಲಿ ಅವಿನಾಶ್ ಶೆಟ್ಟಿಯವರ ಜತೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ರಾಜ್ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಮೋಹನ್ ಶೆಟ್ಟಿ, ತ್ರಿವಿಕ್ರಮ್ ಕಿಣಿ, ಮಾಲಿನಿ ಜೆ. ಶೆಟ್ಟಿ, ಸಂತೋಷ್ ವಾಘ್ಲೆ, ಕನಸುಗಾರ ನವೀನ್ ಬೈಲೂರ್ ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ವಸಂತ್ ಎಂ. ಕಾರ್ಯಕ್ರಮ ನಿರ್ವಹಿಸಿದರು.















































error: Content is protected !!
Scroll to Top