ಉಡುಪಿ : ಉಡುಪಿ ಶ್ರೀ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಅತ್ಯಂತ ವೈಭವದಿಂದ ಜರುಗಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥ ಶ್ರೀಪಾದರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಭಕ್ತಗಡಣ ಉತ್ಸವದಲ್ಲಿ ಪಾಲ್ಗೊಂಡರು.
ಆ. 26ರ ರಾತ್ರಿ ನೈವೇದ್ಯ ಸಮರ್ಪಿಸಿ ಮಹಾಪೂಜೆ ನೆರವೇರಿಸಿದ ಶ್ರೀಪಾದರು ಚಂದ್ರೋದಯದ ವೇಳೆ ಶ್ರೀ ಕೃಷ್ಣನಿಗೆ ಅರ್ಘ್ಯ ಅರ್ಪಿಸಿದರು. ಬಳಿಕ ಭಕ್ತರಿಗೆ ಅರ್ಘ್ಯ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಮಧ್ವಮಂಟಪದಲ್ಲಿ ಮರದ ತೊಟ್ಟಿಲೊಳಗಿರುವ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಗೆ ಶ್ರೀಪಾದರು ಪೂಜೆ ಸಲ್ಲಿಸುವ ಮೂಲಕ ಡೋಲು ಉತ್ಸವಕ್ಕೆ ಚಾಲನೆ ನೀಡಿದರು.

ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಮಠವನ್ನು ಹೂವು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಶ್ರೀ ಕೃಷ್ಣಮಠದ ಹೊರಗೆ ಹಾಗೂ ರಥಬೀದಿಯ ಸುತ್ತ ವಿದ್ದುದ್ದೀಪಾಲಂಕಾರ ಜಗಮಗಿಸುತ್ತಿತ್ತು. ಪರ್ಯಾಯ ಶ್ರೀಪಾದರು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು.


ಸುರತ್ಕಲ್‌ನ ಹೊಸಬೆಟ್ಟು ರಾಜೇಶ್ ಬಾಗ್ಲೋಡು ಮತ್ತು ಬಳಗದವರಿಂದ ಅಷ್ಟೋತ್ತರ ಶತ ಕೊಳಲು ವಾದನ, ಮಣಿಪಾಲದ ಶ್ರೀ ದುರ್ಗಾಂಬಾ ಯಕ್ಷಗಾನ ಕಲಾಮಂಡಳಿಯಿಂದ ಶ್ರೀ ಕೃಷ್ಣ ಪುಷ್ಪ ವಿಲಾಸ ಯಕ್ಷಗಾನ, ಹುಲಿ ವೇಷ ಕುಣಿತ ಪ್ರದರ್ಶನಗೊಂಡಿತು. ರಾಜಾಂಗಣ, ಗೀತಾ ಮಂದಿರ, ಪುತ್ತಿಗೆ ಮಠದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ರಥಬೀದಿ, ನಗರದ ಹಲವೆಡೆ ಕೃಷ್ಣ ವೇಷ, ಹುಲಿವೇಷಧಾರಿಗಳು ಸಂಚರಿಸುತ್ತ ಕಣ್ಮನ ಸೆಳೆದರು. ಯುವರಾಜ್ ಮಸ್ಕತ್ ಅವರು ಸೇವಾರ್ಥವಾಗಿ ಮಾಡಿದ ಪುಷ್ಪಾಲಂಕಾರ ಕಣ್ಮನ ಸೆಳೆಯುತ್ತಿತ್ತು.
ರಾಜ್ಯ, ದೇಶದ ವಿವಿಧೆಡೆಯಿಂದ ಭಕ್ತಾದಿಗಳು ಉಡುಪಿಗೆ ಆಗಮಿಸುವ ಕಾರಣ ಸಾರಿಗೆ ಸೇರಿದಂತೆ ಸೂಕ್ತ ವ್ಯವಸ್ಥೆಗಾಗಿ ಜಿಲ್ಲಾ ಎಸ್‌ಪಿ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಒಬ್ಬರು ಡಿವೈಎಸ್‌ಪಿ, 4 ಮಂದಿ ಇನ್‌ಸ್ಪೆಕ್ಟರ್‌ಗಳು, 200 ಮಂದಿ ಪೊಲೀಸ್ , 50 ಮಂದಿ ಹೋಂ ಗಾರ್ಡ್‌ಗಳು, 4 ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾರ್ಯನಿರ್ವಹಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ರಥಬೀದಿ ಸೇರಿದಂತೆ ಶ್ರೀಕೃಷ್ಣ ಮಠದ ಆಸುಪಾಸು 15ಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು.3ಡಿಯಲ್ಲಿ ಕೃಷ್ಣಾವತಾರ
ಕೃಷ್ಣನ ಲೀಲೆಯನ್ನು ಭಕ್ತರಿಗೆ ಕಣ್ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಗೀತಾಮಂದಿರದ ಮುಂಭಾಗದಲ್ಲಿ 3ಡಿ ವ್ಯವಸ್ಥೆ ಮಾಡಲಾಗಿತ್ತು. ಬೃಹತ್ ಪರದೆಯ ಮೇಲೆ ಸುಮಾರು 7 ನಿಮಿಷಗಳ 3ಡಿ ವೀಡಿಯೋ ಪ್ರದರ್ಶನಗೊಂಡಿತು.

































































