ಕಾರ್ಕಳ : ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವ ನಿಟ್ಟಿನಲ್ಲಿ, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ಮತ್ತು ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಸಲುವಾಗಿ ಕೃಷಿ ಭಾಗ್ಯ ಯೋಜನೆಯನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Fencing), ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್, ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ ಘಟಕಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ.
ಕೃಷಿ ಭಾಗ್ಯ ಪ್ಯಾಕೇಜಿನಲ್ಲಿ ಒಟ್ಟಾರೆ 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು ಎಲ್ಲಾ ಘಟಕಗಳನ್ನು ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆದುಕೊಳ್ಳುವುದು, ಸಾಮಾನ್ಯ ವರ್ಗದ ರೈತರಿಗೆ ಶೇ. 80ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡಲು ಅವಕಾಶವಿದೆ. ಆಸಕ್ತಿಯುಳ್ಳ ರೈತರು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಅಳತೆಯ ಪೋಟೊ, ಪಹಣಿ ಜಾತಿ ಪ್ರಮಾಣ ಪತ್ರ,ಬ್ಯಾಂಕ್ ಪುಸ್ತಕದ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಲು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
































