ಫಲವತ್ತಾದ ಮಣ್ಣು ಶ್ರೇಷ್ಠ ಸಂಪತ್ತು – ಸಂತೋಷ ಶೆಟ್ಟಿ
ಕೃಷಿ ಕಷ್ಟವಾದರೂ ಇಷ್ಟಪಟ್ಟು ಮಾಡಬೇಕು-ಜ್ಞಾನದೇವ
ಕಾರ್ಕಳ: ಫಲವತ್ತಾದ ಮಣ್ಣು ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದವನ್ನು ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಹಸಿರೊಡನೆ ಕಲಿಕೆಯ ಕಲರವ ಕ್ರಿಯೇಟಿವ್ ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಶು ವೈದ್ಯ ಸಾಣೂರಿನ ಜ್ಞಾನದೇವ ಮಾತನಾಡಿ, ಇಂದು ಜಗತ್ತೇ ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು ಅಗತ್ಯ ಸಂಪೂರ್ಣ ಸಾವಯವ ಪ್ರಧಾನವಾದ ಕೃಷಿ ನಡೆಸುವುದಾಗಿದೆ. ಕೃಷಿ ಕಷ್ಟಕರವಾದರೂ ಅದನ್ನು ಇಷ್ಟಪಟ್ಟು ಮಾಡಬೇಕಾಗಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ಥ್ ಎಸ್. ಎಲ್. ಮಾತನಾಡಿ, ಕೃಷಿ ಮೂಲವೇ ನಾಗರಿಕತೆಯ ಮೂಲ. ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ. ಈಗಿನ ಆಹಾರ ಪದ್ಧತಿ ಕೆಟ್ಟುಹೋಗಿದೆ. ಹಿಂದಿನವರ ಆಹಾರ ಕ್ರಮ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ ಎಂದರು.

ಸಹಸಂಸ್ಥಾಪಕ ಡಾ. ಬಿ. ಗಣನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕಲಿಕೆಯನ್ನು ರೂಢಿಸಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಬದುಕಿನ ಪಾಠ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಸಹಸಂಸ್ಥಾಪಕ ಗಣಪತಿ ಭಟ್ ಕೆ.ಎಸ್. ಉಪಸ್ಥಿತರಿದ್ದರು.
ಗ್ರಾಮದ ಹಿರಿಯ ಕೃಷಿಕರಾದ ದಿನೇಶ್ ನಾಯಕ್ ಮತ್ತು ವಸಂತ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾಸಂಸ್ಥೆಯ ಉಪನ್ಯಾಸಕ ವರ್ಗದವರು, ಊರ ಗಣ್ಯರು ಭಾಗವಹಿಸಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಉಮೇಶ್ ವಂದಿಸಿದರು.
ಸಮಾರೋಪ
ಸಮಾರೋಪ ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಹಾಗೂ ಕಾರ್ಕಳ ಬಂಟ್ಸ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಲಾಯಿ ಬಾಕ್ಯಾರು ಮುಖ್ಯೋಪಾಧ್ಯಾಯ ತೆಳ್ಳಾರು ಕೆ. ಯೋಗೀಶ್ ಕಿಣಿ ಅನಿಸಿಕೆ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಕೃಷಿಯ ಮಹತ್ವವನ್ನು ತಿಳಿಸಿಕೊಟ್ಟರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಆದರ್ಶ ಎಂ. ಕೆ. ಉಪಸ್ಥಿತರಿದ್ದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಬಿ.ಗಣನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


































































