ಮಾನಹಾನಿ (Defamation)

ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಈ ಹಿಂದೆ 1860ನೇ ಇಸವಿಯಿಂದ ಭಾರತ ದಂಡ ಸಂಹಿತೆ 1860 ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದ್ದ ಬಹಳ ಪುರಾತನವಾದ ಕ್ರಿಮಿನಲ್ ಕಾನೂನನ್ನು ಕೇಂದ್ರ ಸರಕಾರವು ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ನಿರಸನಗೊಳಿಸಿದ್ದು ಅದರ ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023 ಎಂಬ ಹೊಸ ಅಧಿನಿಯಮವನ್ನು 2024 ಜುಲೈ 1 ರಿಂದ ದೇಶದಾದ್ಯಂತ ಜಾರಿಗೆ ಬಂದಿರುತ್ತದೆ. ಶಿಕ್ಷಾರ್ಹ ಅಪರಾಧಗಳ ಪೈಕಿ ಮಾನ ಹಾನಿ ಎಂಬ ಅಪರಾಧವು ಈ ಹಿಂದೆ ಭಾರತ ದಂಡ ಸಂಹಿತೆ 1860 ಎಂಬ ಅಧಿನಿಯಮದಲ್ಲಿ ಕಲಂ ನಂಬ್ರ 499 ರಿಂದ 502 ರಲ್ಲಿ ಉಲ್ಲೇಖಿಸಿದ್ದು ಬದಲಾದ ಭಾರತೀಯ ನ್ಯಾಯ ಸಂಹಿತೆ 2023 ರಲ್ಲಿ ಈ ಅಪರಾಧವನ್ನು ಕಲಂ ನಂಬ್ರ 356(1) ರಿಂದ 356 (4) ರಲ್ಲಿ ಉಲ್ಲೇಖಿಸಲಾಗಿರುತ್ತದೆ.

ಒಬ್ಬ ವ್ಯಕ್ತಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇನ್ನೊಬ್ಬ ವ್ಯಕ್ತಿಯ ಗೌರವ, ಘನತೆ, ಖ್ಯಾತಿ, ಚಾರಿತ್ರ್ಯವನ್ನು ಕುಗ್ಗಿಸುವ ಅಥವಾ ಅವುಗಳಿಗೆ ಹಾನಿ ಉಂಟುಮಾಡಬೇಕೆನ್ನುವ ದುರುದ್ದೇಶದಿಂದ ಮೌಖಿಕವಾಗಿ, ಲಿಖಿತವಾಗಿ, ಸನ್ನೆಗಳಿಂದ ಅಥವಾ ಕಿವಿಗೆ ಕೇಳಿಸುವಂಥ ಮಾತುಗಳಿಂದ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಕಟಿಸಿದರೆ ಸಂಬಂಧಪಟ್ಟ ವ್ಯಕ್ತಿಯು ಮಾನಹಾನಿ ಕ್ರಿಮಿನಲ್ ಅಪರಾಧ ಕೃತ್ಯ ನಡೆಸಿದಂತಾಗಿ ಕಾನೂನಿನ ನಿಯಮಾನುಸಾರವಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಾತ್ರವಲ್ಲದೆ ಈ ರೀತಿಯ ಮಾನಹಾನಿ ಕೃತ್ಯಕ್ಕೆ ಒಳಗಾದ ನೊಂದಿತ ವ್ಯಕ್ತಿಯು ಮಾನಹಾನಿ ಕೃತ್ಯ ನಡೆಸಿದ ವ್ಯಕ್ತಿಯ ವಿರುದ್ಧ ಸೂಕ್ತ ಪರಿಹಾರ ಕೋರಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ದಾವೆಯನ್ನು ಸಹ ದಾಖಲು ಮಾಡಬಹುದಾಗಿದೆ. ಇದೇ ಪ್ರಕಾರ ಒಬ್ಬ ವ್ಯಕ್ತಿ ಇನ್ನೊಬ್ಬ ಮೃತ ವ್ಯಕ್ತಿಯ ಖ್ಯಾತಿಗೆ ಹಾನಿ ಉಂಟು ಮಾಡುವ ಮತ್ತು ಮೃತ ವ್ಯಕ್ತಿಯ ಕುಟುಂಬದ ಅಥವಾ ನಿಕಟ ಸಂಬಂಧಿಕರ ಭಾವನೆಗಳಿಗೆ ನೋವನ್ನು ಉಂಟು ಮಾಡುವ ದುರುದ್ದೇಶದಿಂದ ಯಾವುದೇ ಮೃತ ವ್ಯಕ್ತಿಯನ್ನು ಸಹ ಉಲ್ಲೇಖಿಸಿ ಮಾನಹಾನಿಕರವಾದ ಆರೋಪಣೆಯನ್ನು ಮಾಡಿದಾಗ ಅದನ್ನು ಕೂಡ ಮಾನಹಾನಿಕರ ಕೃತ್ಯ ಎಂಬುದಾಗಿ ಪರಿಗಣಿಸಲ್ಪಡಬೇಕಾಗುತ್ತದೆ.

ಮೇಲೆ ವಿವರಿಸಿದ ದುರುದ್ದೇಶಪೂರ್ವಕವಾಗಿ ಯಾವುದೇ ಒಂದು ಕಂಪೆನಿ, ಸಂಸ್ಥೆ ಅಥವಾ ಸಮುದಾಯವನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ಇಲ್ಲವೇ ಪರ್ಯಾಯ ರೂಪದಲ್ಲಿ ಮಾಡಿದ ಆರೋಪವೂ ಮಾನಹಾನಿಕರ ಕೃತ್ಯದ ಆರೋಪ ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಸಾರ್ವಜನಿಕ ಹಿತ ದೃಷ್ಟಿಯಿಂದ ಮತ್ತು ಯಾವುದೇ ರೀತಿಯ ದುರುದ್ದೇಶ ಹೊಂದದೆ ಒಬ್ಬ ವ್ಯಕ್ತಿ, ಸಂಸ್ಥೆ ಅಥವಾ ಸಮುದಾಯಕ್ಕೆ ಸಂಬಂಧಪಟ್ಟ ಸತ್ಯ ಸಂಗತಿಯನ್ನು ಬಯಲಿಗೆಳೆಯುವ ಉದ್ದೇಶದಿಂದ ಪ್ರಕಟಿಸುವ ಯಾವುದೇ ವಿಷಯವನ್ನು ಮಾನಹಾನಿಕರ ಕೃತ್ಯ ಎಂಬುದಾಗಿ ಪರಿಗಣಿಸಲು ಆಗುವುದಿಲ್ಲ. ಪ್ರತಿಯೊಂದು ಆರೋಪವನ್ನು ಮಾನಹಾನಿಕರ ಆರೋಪವೆಂದು ಪರಿಗಣಿಸಲು ಆಗುವುದಿಲ್ಲ. ಒಬ್ಬ ವ್ಯಕ್ತಿಯ ದೇಹದ ಸ್ಥಿತಿ ಅಥವಾ ಚಹರೆಯನ್ನು ಅಸಹ್ಯಕರ ಮತ್ತು ವಿಚಿತ್ರ ರೀತಿಯಲ್ಲಿ ಬಣ್ಣಿಸಿ ಪ್ರಕಟಿಸಿದ ಮಾತ್ರಕ್ಕೆ ಆ ವ್ಯಕ್ತಿಯ ಖ್ಯಾತಿಗೆ ಹಾನಿ ಉಂಟಾಗಿರುತ್ತದೆ ಮತ್ತು ಈ ರೀತಿಯಾಗಿ ಆತನಿಗೆ ಮಾನಹಾನಿ ಉಂಟಾಗಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಈ ಸಂದರ್ಭದಲ್ಲಿ ವಿವಾದಿತ ಮಾನಹಾನಿ ಕೃತ್ಯದಿಂದಾಗಿ ಅಥವಾ ಆರೋಪದಿಂದಾಗಿ ನೊಂದಿತ ವ್ಯಕ್ತಿಯ ಗೌರವ, ಘನತೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕುಂದು ಉಂಟಾಗಿ ಆತನ ನೈತಿಕತೆಗೆ, ಚಾರಿತ್ರ್ಯಕ್ಕೆ, ಜಾತಿಗೆ ಅಥವಾ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಅವಮಾನ ಮತ್ತು ಮಾನಹಾನಿ ಉಂಟಾಗಿದೆಯೋ ಇಲ್ಲವೋ ಎಂಬುದನ್ನು ನ್ಯಾಯಾಲಯವು ನಿರ್ಧರಿಸಬೇಕಾಗುತ್ತದೆ. ನ್ಯಾಯಾಲಯದ ವ್ಯವಹರಣೆಗಳ ಬಗ್ಗೆ ಅಥವಾ ಅಂತಹ ಯಾವುದೇ ವ್ಯವಹರಣೆಗಳ ಫಲಿತಾಂಶದ ಬಗ್ಗೆ ಬಹುಮಟ್ಟಿಗೆ ಯಥಾರ್ಥವಾದ ವರದಿಯನ್ನು ಪ್ರಕಟಿಸುವುದು ಮಾನಹಾನಿಯೆಂದಾಗುವುದಿಲ್ಲ. ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸದ್ಭಾವನೆಯಿಂದ ಎಚ್ಚರಿಕೆ ಕೊಡುವುದು ಮಾನಹಾನಿಯೆನಿಸುವುದಿಲ್ಲ. ಆದರೆ ಈ ರೀತಿಯಾಗಿ ಕೊಡುವ ಎಚ್ಚರಿಕೆಯು ಸಂಬಂಧಪಟ್ಟ ವ್ಯಕ್ತಿಯ ಹಿತವನ್ನು ಅಥವಾ ಸಾರ್ವಜನಿಕ ಹಿತವನ್ನು ರಕ್ಷಿಸುವ ಉದ್ದೇಶದಿಂದ ಇರಬೇಕು. ಒಟ್ಟಾರೆ ಇನ್ನೊಬ್ಬ ವ್ಯಕ್ತಿಗೆ ದುರುದ್ದೇಶಪೂರ್ವಕವಾಗಿ ಮೇಲ್ಕಾಣಿಸಿದ ರೀತಿಯಲ್ಲಿ ಮಾನಹಾನಿಯುಂಟು ಮಾಡುವ ಯಾವುದೇ ವ್ಯಕ್ತಿಯು, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಸಾದಾ ಜೈಲು ಶಿಕ್ಷೆಯಿಂದ (ಕಾರಾವಾಸದಿಂದ), ಜುಲ್ಮಾನೆಯಿಂದ ಅಥವಾ ಸಾಮುದಾಯಿಕ ಸೇವೆಯಿಂದ ದಂಡಿತನಾಗಬೇಕಾಗುತ್ತದೆ. ಮಾತ್ರವಲ್ಲದೆ ಬಾಧಿತ ವ್ಯಕ್ತಿಗೆ ಸೂಕ್ತ ಮೊತ್ತದ ಪರಿಹಾರವನ್ನು ಸಹ ನೀಡಬೇಕಾಗುತ್ತದೆ.















































error: Content is protected !!
Scroll to Top