ಉಡುಪಿ : ಪಡುಬಿದಿರೆ ಕಂಚಿನಡ್ಕ ಬಳಿ ಟೋಲ್ ಗೇಟ್ ಸ್ಥಾಪನೆ ಬಗ್ಗೆ ಸಾರ್ವಜನಿಕರಿಂದ ವಿರೋಧ ಇದೆ ಎನ್ನುವ ಮಾಹಿತಿ ಇದೆ. ನಾಲ್ಕು ಕಿಲೋ ಮೀಟರ್ ನಲ್ಲಿ ಎರಡು ಟೋಲ್ ಗೇಟ್ ಸ್ಥಾಪನೆ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್‌ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತೇನೆ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗುರುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ನಾಲ್ಕು ಕಿಲೋ ಮೀಟರ್‌ನಲ್ಲಿ ಎರಡು ಕಡೆ ಸುಂಕ ಪಾವತಿ ಜನರಿಗೆ ಹೊರೆಯಾಗಲಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಮೋಸ ಮಾಡಿದ್ದಾರೆ
ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ. ದೇವರ- ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು, ಈಗ ಭಗವಂತನಿಗೆ ಮೋಸ ಮಾಡಿದ್ದಾರೆ. ಮೂರ್ತಿ ಕಂಚಿನದ್ದೋ ಅಥವಾ ಫೈಬರಿನದ್ದೊ ಎಂಬುದು ಜಗಜ್ಜಾಹಿರಾಗಿದೆ. ಬಿಜೆಪಿಗೆ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಕರಗತವಾಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಸಭೆ ಸರಕಾರಿ ಕಚೇರಿಯಲ್ಲೇ ನಡೆಯಬೇಕು
ಬೈಂದೂರಿನಲ್ಲಿ ಕಾಂಗ್ರೆಸ್ – ಬಿಜೆಪಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಹಕ್ಕುಚ್ಯುತಿ ಎಂದರೇನು ? ಎಂದು ಎರಡು ಬಾರಿ ಶಾಸಕಿಯಾದ ನನಗೂ ಗೊತ್ತು. ಅಧಿಕಾರದ ಲಾಭ, ದುರ್ಲಾಭದ ಬಗ್ಗೆ ನನಗೂ ಸಾಮಾನ್ಯ ಜ್ಞಾನ ಇದೆ. ಯಾರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಸಭೆ ಎಲ್ಲಿ ಕರಿಯಬೇಕು, ಅಲ್ಲಿಯೇ ಕರೆಯಬೇಕು, ಏನೂ ತೊಂದರೆ ಆಗಲ್ಲ. ತನ್ನ ಖಾಸಗಿ ಸ್ಥಳದಲ್ಲಿ ಅಧಿಕಾರಿಗಳನ್ನು ಸಭೆಗೆ ಕರೆದರೆ ತೊಂದರೆಯಾಗುತ್ತದೆ. ಸರಕಾರಿ ಕಾರ್ಯಕ್ರಮಗಳು ಸರಕಾರಿ ಕಚೇರಿಯಲ್ಲಿ ಆಗುವುದೇ ಒಂದು ಶಿಷ್ಟಾಚಾರ ಎಂದು ಬೈಂದೂರು ಶಾಸಕರಿಗೆ ನಡೆಸಿದ ಧರಣಿ ಕುರಿತು ಲಕ್ಷ್ಮೀ ಅವರು ಪ್ರತಿಕ್ರಿಯಿಸಿದರು.
ನಮ್ಮ ಸಿಎಂ ಹುಲಿ ಇದ್ದಂತೆ
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ಬುಲೆಟ್ ಪ್ರೂಫ್ ತೆಗೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕರ್ನಾಟಕ ರಾಜ್ಯ ಶಾಂತಿ ಪ್ರಿಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಬುಲೆಟ್ ಪ್ರೂಫ್ ಬೇಕಾ ? ನಮ್ಮ ಸಿದ್ದರಾಮಯ್ಯನವರು ಯಾವತ್ತೂ ಸ್ಟ್ರಾಂಗ್. ಅದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ನವರಿಗೆ ಹುಲಿ ಎಂದು ಹೆಸರು ಬಂದಿರುವುದು ಇದಕ್ಕೆ ಎಂದರು.
ಮರವಂತೆ – ಸೋಮೇಶ್ವರ ಬೀಚ್ ಬಂದರು ಕಾಮಗಾರಿ ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಗುತ್ತಿಗೆದಾರ ಬಿರಾದಾರ್ ಜೊತೆ ಮಾತನಾಡಿದ್ದೇನೆ. ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ. ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ತಿಳಿಸಿದರು.























