ಒಂದೇ ವಾರದಲ್ಲಿ 10 ಮಿಲಿಯನ್ ವ್ಯೂ ದಾಖಲೆ!
ಇಂದು ಸಾಮಾಜಿಕ ಜಾಲತಾಣದಲ್ಲಿ, ಯು ಟ್ಯೂಬ್ ವೇದಿಕೆಯಲ್ಲಿ, ರಸಮಂಜರಿ ಕಾರ್ಯಕ್ರಮಗಳಲ್ಲಿ, ಮದುವೆ ಪೆಂಡಾಲಗಳಲ್ಲಿ, ರೀಲ್ಸ್ ತಾಣಗಳಲ್ಲಿ ಒಂದೇ ಹಾಡು ಸುನಾಮಿ ಕ್ರಿಯೇಟ್ ಮಾಡ್ತಾ ಇದೆ ಅಂದರೆ ನೀವು, ನಾವು ನಂಬಲೇ ಬೇಕು. ಆ ಸಿನೆಮಾ ಇನ್ನೂ ಬಿಡುಗಡೆ ಆಗಿಲ್ಲ. ಅದರ ಮೊದಲೇ ಆ ಹಾಡಿನ ವಿಡಿಯೋ ಯು ಟ್ಯೂಬ್ ವೇದಿಕೆಯಲ್ಲಿ 10 ಮಿಲಿಯನ್ ವ್ಯೂಸ್ ಪಡೆಯಿತು ಅಂದರೆ ಅದು ಸ್ಮಾಷ್ ಹಿಟ್ ಎನ್ನುವುದಕ್ಕೆ ಬೇರೆ ಸಾಕ್ಷಿಯೇ ಬೇಕಾಗಿಲ್ಲ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ಆಲ್ ಟೈಮ್ ರೆಕಾರ್ಡ್!
ಹಾಡಿನ ಸಾಹಿತ್ಯವೇ ಅದ್ಭುತ!
ಕನ್ನಡದ ಶ್ರೇಷ್ಠ ಸಿನೆಮಾ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಅತ್ಯಂತ ಸುಲಲಿತವಾದ ಸಾಲುಗಳು, ಸುಂದರವಾದ ಪ್ರಾಸ, ಹೆಣ್ಣನ್ನು ಚಂದವಾಗಿ ಬಣ್ಣಿಸುವ ರೂಪಕಗಳು ಇವುಗಳಿಂದ ಶ್ರೀಮಂತವಾದ ಸಾಹಿತ್ಯ ಇಲ್ಲಿದೆ. ಜೇನ ದನಿಯೋಳೆ ಮೀನ ಕಣ್ಣೋಳೆ……ಮೊದಲಾದ ಸಾಲುಗಳು ವೇಗವಾಗಿ ಸಾಗುವಾಗ ಕಚಗುಳಿ ಇಡುತ್ತವೆ. ಹೆಣ್ಣನ್ನು ನಿಹಾರಿಕಾ, ವೆರೋನಿಕಾ ನೀನೇನೆ ಎಂದೆಲ್ಲ ಕರೆಯುವ ಸಾಲುಗಳು ಇಡೀ ಹಾಡಿನ ತುಂಬಾ ವಿದ್ಯುತ್ಸಂಚಾರ ಉಂಟುಮಾಡುತ್ತದೆ. ‘ದ್ವಾಪರ ದಾಟುತ ನನ್ನನ್ನು ನೋಡಲು ನನ್ನನ್ನು ಸೇರಲು ಬಂದ ರಾಧಿಕೆ’ ಎನ್ನುವ ಮೊದಲ ಸಾಲೇ ಒಂದು ಸುಂದರವಾದ ರೂಪಕ. ‘ನೀನೇ ನನ್ನ ನಿಲ್ದಾಣ’ ಎನ್ನುವ ನುಡಿಗಟ್ಟು ಕನ್ನಡಕ್ಕೆ ಹೊಸತು. ಈ ಹಾಡಿನ ಸಾಹಿತ್ಯವು ಯುವಜನತೆಯ ಹೃದಯಬಡಿತವಾಗಿ ಮೂಡಿಬಂದಿದೆ, ಸರಳವಾಗಿದೆ ಮತ್ತು ತಾಜಾತನ ಹೊಂದಿದೆ.


ಅರ್ಜುನ್ ಜನ್ಯ ಎಂಬ ಮಿರಾಕಲ್!
ಅರ್ಜುನ್ ಜನ್ಯ ಕನ್ನಡಕ್ಕೆ ಸಂಗೀತ ನಿರ್ದೇಶಕರಾಗಿ ಬಂದು ಇಂದು ಎರಡು ದಶಕಗಳೇ ಕಳೆದಿವೆ. ಅವರು ಸಂಗೀತ ಕೊಟ್ಟ ಹೆಚ್ಚಿನ ಹಾಡುಗಳು ಮತ್ತು ಸಿನೆಮಾಗಳು ಸೂಪರ್ ಹಿಟ್ ಆಗಿವೆ. ಈ ದ್ವಾಪರ ಹಾಡನ್ನು ಅವರು ಮ್ಯಾಜಿಕಲ್ ಆಗಿ ಕಂಪೋಸ್ ಮಾಡಿದ್ದಾರೆ. ಮೆಲೋಡಿ, ರಿದಂ ಮತ್ತು ವೇಗ ಈ ಮೂರೂ ಒಂದಕ್ಕೊಂದು ಪೂರಕವಾದಾಗ ಮಾತ್ರ ಇಂತಹ ಹಾಡು ಸೃಷ್ಟಿ ಆಗುತ್ತದೆ. ಹಿನ್ನೆಲೆಯಲ್ಲಿ ಸೋನೆ ಮಳೆಯನ್ನು ಸುರಿಯುವ ವಯೋಲಿನ್, ಗಿಟಾರ್, ಕೀ ಬೋರ್ಡ್ ಮತ್ತು ರಿದಂ ಪ್ಯಾಡಗಳ ನಾದದಲ್ಲಿ ಸಾಹಿತ್ಯದ ಒಂದಕ್ಷರ ಕೂಡ ಕೆಡದ ಹಾಗೆ ಅರ್ಜುನ್ ಜನ್ಯ ನೋಡಿಕಂಡಿದ್ದಾರೆ. ಯಾವುದೇ ಸಾಲು ಹೆಚ್ಚು ಬಾರಿ ರಿಪೀಟ್ ಆಗದ ಕಾರಣ ಇಡೀ ಹಾಡಿನಲ್ಲಿ ಫ್ರೆಶನೆಸ್ ಹಾಗೆಯೇ ಉಳಿದಿದೆ. ಅರ್ಜುನ್ ಜನ್ಯ ಸ್ವತಃ ಉತ್ತಮ ಗಿಟಾರಿಸ್ಟ್ ಆಗಿರುವ ಕಾರಣ ಇಂತಹ ಹಾಡನ್ನು ಸೃಷ್ಟಿಸಲು ಅವರಿಗೆ ಸಾಧ್ಯವಾಗಿದೆ. ಯುವಜನತೆಗೆ ಏನು ಬೇಕು ಎಂದು ಅರ್ಜುನ್ ಜನ್ಯ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಅದರಿಂದಾಗಿ ದ್ವಾಪರ ಹಾಡು ಇಂದು ಡ್ಯೂಪರ್ ಹಿಟ್ ಆಗಿದೆ.

ಜಸ್ಕರಣ್ ಸಿಂಗ್ ಎಂಬ ಮ್ಯಾಜಿಕಲ್ ವಾಯ್ಸ್!
ಯಾವಾಗಲೂ ಹೊಸ ಧ್ವನಿಗಳ ತಲಾಶೆಯಲ್ಲಿ ಇರುವ ಅರ್ಜುನ್ ಜನ್ಯ ಈ ಬಾರಿ ಎತ್ತಿಕೊಂಡು ಬಂದದ್ದು ಪಂಜಾಬಿನ ಪ್ರತಿಭೆಯನ್ನು. ಸಾರೆಗಾಮಾ ಎಂಬ ದೊಡ್ಡ ರಿಯಾಲಿಟಿ ಶೋದಲ್ಲಿ ಹಾಡಿ ಮಿಂಚಿದ್ದ ಈ ಅದ್ಭುತ ಪ್ರತಿಭೆಯನ್ನು ಈ ಹಾಡಿಗೋಸ್ಕರ ಅರ್ಜುನ್ ಜನ್ಯ ಕರೆದುತಂದು ತುಂಬಾ ಚಂದವಾಗಿ ದುಡಿಸಿಕೊಂಡಿದ್ದಾರೆ. ಎಲ್ಲಿಯೂ ಬ್ರೇಕ್ ಆಗದ ಅದ್ಭುತವಾದ ಬೇಸ್ ವಾಯ್ಸ್ ಜಸ್ಕರಣ್ ಸಿಂಗ್ ಅವರದ್ದು. ಯಾವುದೇ ಹಾಡು ಆರಂಭವಾಗುವುದು ಬೇಸ್ ವಾಯ್ಸನಿಂದ. ಅದು ಮುಂದೆ ಹೋದಂತೆ ತಾರಕವನ್ನು ತಲುಪುತ್ತದೆ. ಆದರೆ ಇಲ್ಲಿ ಹಾಡು ಆರಂಭವಾಗುವುದೇ ತಾರಕದಿಂದ. ಗಾಯಕನಿಗೆ ಉಸಿರು ತೆಗೆದುಕೊಳ್ಳಲು ಸಿಗುವ ಸ್ಪೇಸಗಳು ಕಡಿಮೆ ಇರುವ ಹಾಡಿದು. ಅಂತಹ ಹಾಡನ್ನು ಜಸ್ಕರಣ್ ಅದ್ಭುತವಾಗಿ ಹಾಡಿದ್ದಾರೆ. ಸಾಹಿತ್ಯದ ಅರ್ಥವನ್ನು ಮಾಡಿಕೊಂಡು ಎಲ್ಲಿಯೂ ತಪ್ಪು ಉಳಿಯದಂತೆ ಸರಾಗವಾಗಿ ಹಾಡಿದ್ದಾರೆ.
ಅವರ ಧ್ವನಿಯಲ್ಲಿ ಅದ್ಭುತವಾದ ಮೆಲಡಿ ಮತ್ತು ಕಶಿಷ್ ಇದೆ. ದ್ವಾಪರ ಹಾಡಿನ ಮೂಲಕ ಕನ್ನಡಕ್ಕೆ ಒಬ್ಬ ವರ್ಸಟೈಲ್ ಸಿಂಗರ್ ದೊರಕಿರುವುದಂತೂ ಹೌದು.

ಕೃಷ್ಣಂ ಪ್ರಣಯ ಸಖೀ – ಭಾರೀ ನಿರೀಕ್ಷಿತ ಸಿನೆಮಾ
ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡದಲ್ಲಿ ಸಾಗಿಬಂದ ದಾರಿಯನ್ನು ಗಮನಿಸಿದಾಗ ತುಂಬಾ ವಿಸ್ಮಯ ಮೂಡುತ್ತದೆ. ಯಾವ ಗಾಡ್ ಫಾದರ್ ಇಲ್ಲದೇ ಪ್ರತಿಭೆಯ ಬಲದಿಂದಲೇ ಎದ್ದು ಬಂದವರು ಗಣೇಶ್. ಮುಂಗಾರು ಮಳೆ, ಗಾಳಿಪಟ, ಚೆಲ್ಲಾಟ, ಚೆಲುವಿನ ಚಿತ್ತಾರ…ಹೀಗೆ ಸಾಲು ಸಾಲು ಮೆಗಾ ಹಿಟ್ ಸಿನೆಮಾಗಳನ್ನು ನೀಡಿದವರು ಅವರು. ಇತ್ತೀಚೆಗೆ ಒಂದು ದೊಡ್ಡ ಗ್ಯಾಪ್ ಮೂಲಕ ಅವರು ಕಂ ಬ್ಯಾಕ್ ಮಾಡುತ್ತಿರುವ ಸಿನೆಮಾ ‘ಕೃಷ್ಣಂ ಪ್ರಣಯ ಸಖಿ.’ ಶ್ರೀನಿವಾಸ್ ರಾಜು ಈ ಸಿನೆಮಾ ನಿರ್ದೇಶನ ಮಾಡುತ್ತಿದ್ದು ಆಗಸ್ಟ್ 15ಕ್ಕೆ ಈ ಸಿನೆಮಾ ಬಿಡುಗಡೆ ಆಗ್ತಾ ಇದೆ. ಮಲಯಾಳಂ ಸುಂದರಿ ಮಾಳವಿಕಾ ನಾಯರ್ ಈ ಹಾಡಿನಲ್ಲಿ ತುಂಬಾ ಸುಂದರವಾಗಿ ಕಂಡುಬರುತ್ತಾರೆ. ಈ ಹಾಡಿಗೆ ಗಣೇಶ್ ಹಾಕಿರುವ ಅತ್ಯಂತ ಸರಳವಾದ ಸ್ಟೆಪ್ಸ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿವೆ. ಪರಿಣಾಮವಾಗಿ ಸಾವಿರಾರು ಜನರು ಇದೇ ಹಾಡಿಗೆ ರೀಲ್ಸ್ ಮಾಡಿ ಜಾಲತಾಣಗಳಲ್ಲಿ ತೇಲಿ ಬಿಟ್ಟಿದ್ದಾರೆ. ರಸಮಂಜರಿ, ಮದುವೆ ಮಂಟಪ, ಸೋಷಿಯಲ್ ಮೀಡಿಯಾ ಎಲ್ಲಾ ಕಡೆಗಳಲ್ಲಿಯೂ ಈಗ ಒಂದೇ ಹಾಡಿನ ಸದ್ದು ಮಾರ್ದನಿಸುತ್ತಿದೆ. ಹಾಡುಗಳ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿರುವ ಆಕಾಶ್ ಆಡಿಯೋ ಸಂಸ್ಥೆಯವರು ಹಾಡಿನ ಸಕ್ಸೆಸ್ ಮೀಟ್ ಕೂಡ ಮಾಡಿದ್ದಾರೆ. ಈ ಹಾಡಿನ ಸಕ್ಸೆಸ್ ಮುಂದೆ ಬರಲಿರುವ ಸಿನೆಮಾವನ್ನು ಗೆಲ್ಲಿಸುತ್ತಾ ಎಂದು ಕಾದುನೋಡಬೇಕು.











































