ಕಂಚು ಗೆದ್ದ ಭಾರತ ಹಾಕಿ ತಂಡ – ಸ್ಪೇನ್ ವಿರುದ್ಧ 2-1 ಗೋಲು ಗೆಲುವು

ಪ್ಯಾರಿಸ್‌ : ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ಸ್ಪೈನ್ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್‌ ತಲುಪಲು ವಿಫಲಗೊಂಡಿದ್ದ ಟೀಮ್ ಇಂಡಿಯಾ ಆ. 8ರಂದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು 2-1 ಗೋಲ್‌ಗಳಿಂದ ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು.

ಪಂದ್ಯದ ಮೊದಲ ಕ್ವಾರ್ಟರ್​​ನಲ್ಲಿ ಎರಡೂ ತಂಡಗಳು ಗೋಲ್​ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್‌ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್​ ಮುನ್ನಡೆಯನ್ನು ಪಡೆದುಕೊಂಡಿತು. ಆದರೆ, ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಹರ್ಮನ್​ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಸಮಬಲಗೊಳ್ಳುವಂತೆ ನೋಡಿಕೊಂಡರು. ಮೂರನೇ ಕ್ವಾರ್ಟರ್​ನಲ್ಲಿ ಮತ್ತೊಂದು ಗೋಲ್ ಬಾರಿಸಿ ಮುನ್ನಡೆ ಪಡೆಯುವಂತೆ ಮಾಡಿದರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ಭಾರತ ಗೆಲುವು ಸಾಧಿಸಿತು.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ 41 ವರ್ಷಗಳ ಬಳಿಕ ಅಮೋಘ ಸಾಧನೆ ಮಾಡಿತ್ತು. ಒಲಿಂಪಿಕ್ ನಲ್ಲಿ ಭಾರತ ಪುರುಷರ ತಂಡವು ಎಂಟು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಕೊನೆಯ ಚಿನ್ನದ ಪದಕ 1980ರಲ್ಲಿ ಬಂದಿತ್ತು. ಅನಂತರ ತಂಡವು 41 ವರ್ಷಗಳ ಪದಕ ಬರವನ್ನು ಎದುರಿಸಿತ್ತು. ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.
ಸರಣಿಯುದ್ದಕ್ಕೂ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಗೋಲ್ ಕೀಪರ್​ ಶ್ರೀಜೇಶ್ ಅವರಿಗೆ ಈ ಪದಕದೊಂದಿಗೆ ವಿದಾಯದ ಕೂಟವಾಗಲಿದೆ. ಒಲಿಂಪಿಕ್ಸ್​ ಆರಂಭಕ್ಕೆ ಮುನ್ನವೇ ಇದು ನನಗೆ ಕೊನೆಯ ಅಂತಾರಾಷ್ಟ್ರೀಯ ಟೂರ್ನಿ ಎಂದು ಹೇಳಿದ್ದರು.















































error: Content is protected !!
Scroll to Top