ಉಡುಪಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂ.4 ರಂದು ಬ್ರಹ್ಮಗಿರಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ಸದ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿರುತ್ತಾರೆ.
ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್ನಿಂದ ನಾಯಕ್ ಕ್ಯಾಂಟೀನ್ವರೆಗಿನ ಮತ್ತು ಅಜ್ಜರಕಾಡು ಜಂಕ್ಷನ್ನಿಂದ ಸುದರ್ಶನ್ ರೆಸಿಡೆನ್ಸಿ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬೇಕು.
ಮತ ಎಣಿಕೆಯ ಸಂಬಂಧ ಸರಕಾರಿ ಅಧಿಕಾರಿಗಳ ವಾಹನಗಳ ಪಾರ್ಕಿಂಗ್ ದೃಷ್ಠಿಯಿಂದ ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್ನಿಂದ ಅಜ್ಜರಕಾಡು ಜಂಕ್ಷನ್ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಹಾಗೂ ಅಜ್ಜರಕಾಡು ಜಂಕ್ಷನ್ನಿಂದ ಬ್ರಹ್ಮಗಿರಿ ಜಂಕ್ಷನ್ ವರೆಗಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಬದಲಾಯಿಸಿದೆ.
ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ನಿಯಮ 1989 ರ ನಿಯಮ 221 (5)(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಈ ಆದೇಶವನ್ನು ಹೊರಡಿಸಿರುತ್ತಾರೆ
































































