ಸಮಾಜದಲ್ಲಿ ನಡೆಯುವ ಯಾವುದೇ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾದ ಅಪರಾಧಿಗಳನ್ನು, ಅಪರಾಧದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಮತ್ತು ಅಪರಾಧಕ್ಕೆ ಸಂಬಂಧಪಟ್ಟಂತೆ ನಿಖರ ಕಾರಣವನ್ನು ಇತ್ಯಾದಿ ವಿಚಾರಗಳನ್ನು ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ತನಿಖಾಧಿಕಾರಿಯು ತಾನು ಹೊಂದಿರುವ ತರಬೇತಿ ಮತ್ತು ಅನುಭವದ ಆಧಾರದಲ್ಲಿ ಪ್ರಕರಣದ ಯಶಸ್ವಿ ತನಿಖೆ ನಡೆಸಬೇಕಾಗುತ್ತದೆ. ಈಗಿನ ಆಧುನಿಕ ಯುಗದಲ್ಲಿ ಒಂದು ಕಡೆಯಲ್ಲಿ ಪೊಲೀಸರು ಅಪರಾಧ ಪ್ರಕರಣದ ತನಿಖೆಗಾಗಿ ವಿವಿಧ ರೀತಿಯ ಪರಿಣಾಮಕಾರಿಯಾದ ವೈಜ್ಞಾನಿಕ ವಿಧವನ್ನು ಅನುಸರಿಸುತ್ತಿರುವಾಗ ಇನ್ನೊಂದು ಕಡೆಯಲ್ಲಿ ಅಪರಾಧಿಗಳು ಸಹಾ ತಾವು ಮಾಡಿದ ಅಪರಾಧದ ಸುಳಿವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದರಿಂದ ಯಾವುದೇ ಒಂದು ಕ್ರಿಮಿನಲ್ ಅಪರಾಧದ ತನಿಖೆಯ ಸಂದರ್ಭದಲ್ಲಿ ಪೊಲೀಸರು ವಿವಿಧ ಭೌತಿಕ ಸುಳಿವುಗಳನ್ನು ಕಾನೂನುಬದ್ಧವಾಗಿ ಅಂಗೀಕರಿಸಬಹುದಾದ ರೀತಿಯಲ್ಲಿ ಕಲೆ ಹಾಕಿ ಅಪರಾಧಕ್ಕೆ ಸಂಬಂಧಪಟ್ಟಂತೆ ಜಪ್ತಿ ಮಾಡುವ ವಿವಿಧ ವಸ್ತುಗಳನ್ನು ವೈಜ್ಞಾನಿಕ ವಿಶ್ಲೇಷಣೆ ಮುಖಾಂತರ ಹಾಗೂ ಕಾನೂನಿನ ನಿಯಮಾನುಸಾರವಾಗಿ ಅಂಗೀಕರಿಸಬಹುದಾದ ತಜ್ಞರ ಅಭಿಪ್ರಾಯದ ನೆಲೆಯಲ್ಲಿ ಅಪರಾಧದ ಕುರಿತು ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ಈ ರೀತಿಯಾಗಿ ವೈಜ್ಞಾನಿಕ ಸಾಕ್ಷ್ಯ ಅಥವಾ ವಿಧಿ ವಿಜ್ಞಾನವು ಅಪರಾಧವನ್ನು ಪತ್ತೆಹಚ್ಚುವಲ್ಲಿ ಮತ್ತು ಅಪರಾಧಿಗಳಿಗೆ ನ್ಯಾಯಾಲಯದ ಮುಖಾಂತರ ಶಿಕ್ಷೆ ಕೊಡಿಸುವಲ್ಲಿ ಮಹತ್ವವನ್ನು ಹೊಂದಿರುತ್ತದೆ.
ಸಾಮಾನ್ಯವಾಗಿ ಅಪರಾಧ ನಡೆದ ಸ್ಥಳದಲ್ಲಿ ಮತ್ತು ಸಂದರ್ಭದಲ್ಲಿ ಕೃತ್ಯಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣಕರ್ತರಾದ ಅಪರಾಧಿಗಳು ಯಾವುದಾದರೂ ಒಂದು ರೀತಿಯ ಕುರುಹು ಅಥವಾ ಭೌತಿಕ ಸುಳಿವನ್ನು ಬಿಟ್ಟುಹೋಗುವುದು ಸಾಮಾನ್ಯವಾಗಿರುತ್ತದೆ. ಈ ಕಾರಣದಿಂದ ಅಪರಾಧದ ಕುರಿತು ತನಿಖೆಯನ್ನು ನಡೆಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯು ಭೌತಿಕ ಸಾಕ್ಷ್ಯವನ್ನು ವೈಜ್ಞಾನಿಕ ತನಿಖೆ ಮುಖಾಂತರ ಗಮನಿಸಿ ಸೂಕ್ತ ಸಾಕ್ಷಾಧಾರವನ್ನು ಸಂಗ್ರಹಿಸಬೇಕಾಗುತ್ತದೆ. ಅವುಗಳು ಯಾವುದೆಂದರೆ :
(1) ಅಪರಾಧ ಅಂದರೆ ಕೃತ್ಯಕ್ಕೆ ಬಲಿಯಾದ ಸಂತ್ರಸ್ತನ ದೇಹ ಮತ್ತು ಉಡುಪುಗಳ ಮೇಲೆ, ಅಪರಾಧಕ್ಕಾಗಿ ಉಪಯೋಗಿಸಿದ ಆಯುಧಗಳ ಮೇಲೆ ಕಂಡುಬರಬಹುದಾದ ರಕ್ತ, ವೀರ್ಯ, ಜೊಲ್ಲು, ಮೂತ್ರ, ಬೆವರುಗಳ ಕಲೆಗಳು.
(2) ಅತ್ಯಾಚಾರ, ಹತ್ಯೆ, ಅಪಘಾತ ಮಾಡಿ ಪರಾರಿಯಾಗುವಂತಹ ಅಪರಾಧಗಳ ಸಂದರ್ಭದಲ್ಲಿ ಕೃತ್ಯದ ಸ್ಥಳದಲ್ಲಿ ಕಂಡುಬರಬಹುದಾದ ಕೂದಲುಗಳು.
(3) ಮಾನವ ಹತ್ಯೆ, ಅಪಘಾತ ಮಾಡಿ ಪರಾರಿಯಾದ ಸಂದರ್ಭದಲ್ಲಿ, ಕೊಲೆ, ಮನೆಗಳ್ಳತನ, ಅತ್ಯಾಚಾರ, ಕಳ್ಳತನ ಮುಂತಾದಂತಹ ಅಪರಾಧಗಳಲ್ಲಿ ಉಪಯೋಗಿಸಿದ ವಾಹನಗಳಲ್ಲಿ ಅಥವಾ ಸ್ಥಳದಲ್ಲಿ ಕಂಡು ಬರುವಂತಹ ಸಾಕ್ಷ್ಯದ ಪ್ರಮುಖ ಅಂಶಗಳಾದ ಪಸ್ತ್ರದ ತುಣುಕುಗಳು.
(4) ದರೋಡೆ, ಕೊಲೆ ನಡೆಸಿ ಶವವನ್ನು ನೇತು ಹಾಕುವುದು, ಕುತ್ತಿಗೆ ಹಿಸುಕಿ ಕೊಲೆ ನಡೆಸುವುದು, ಇತ್ಯಾದಿ ಸಂದರ್ಭಗಳಲ್ಲಿ ಕೃತ್ಯ ನಡೆಸುವುದಕ್ಕಾಗಿ ಸಾಮಾನ್ಯವಾಗಿ ಉಪಯೋಗಿಸುವಂತಹ ಹಗ್ಗಗಳು.
(5) ಗಾಜುಗಳ ಮುಖಾಂತರ ಅಗ್ನ್ಯಸ್ತ್ರಗಳನ್ನು ಉಪಯೋಗಿಸಿರುವಾಗ ಮತ್ತು ಅಪರಾಧಗಳ ಇತರ ಬಗೆಯ ಸಾಕಷ್ಟು ವಿಧದ ಸಂದರ್ಭಗಳಲ್ಲಿ, ಪದೇ ಪದೇ ದರೋಡೆಗಳು, ಕೊಲೆಗಳು, ಹತ್ಯೆಗಳು, ಮೋಟಾರು ವಾಹನ ಅಪಘಾತಗಳಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುವ ಗಾಜು.
(6) ಒಬ್ಬ ವ್ಯಕ್ತಿಯು ಒಂದು ನಿಶ್ಚಿತ ಸ್ಥಳಕ್ಕೆ ಹೋಗಿದ್ದಾನೆಯೋ ಅಥವಾ ಇಲ್ಲವೋ ಹಾಗೂ ಆತ ಸೆಣಸಾಡುವ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಲ್ಲಿ ಆತನ ಪಾದರಕ್ಷೆ, ವಸ್ತುಗಳ ಮೇಲೆ ಮಣ್ಣು ಕಂಡುಬರುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ದೃಢೀಕರಿಸಲು ಮತ್ತು ಸಾಕ್ಷ್ಯಕ್ಕಾಗಿ ಉಪಯೋಗಿಸಲು ಕೃತ್ಯದ ಸ್ಥಳದಲ್ಲಿ ಲಭ್ಯವಾಗುವ ವಸ್ತು ಮತ್ತು ಮಣ್ಣು
(7) ಮನೆಗಳ್ಳತನ, ಮೋಟಾರು ವಾಹನ ಅಪಘಾತದ ಸ್ಥಳ, ಭದ್ರತಾ ತಿಜೋರಿಯನ್ನು ಒಡೆದ ಅಪರಾಧಗಳ ಪ್ರಕರಣಗಳ ಸಂದರ್ಭದಲ್ಲಿ ಸಂದೇಹಾಸ್ಪದ ವ್ಯಕ್ತಿಯ ವಸ್ತುಗಳ ಮೇಲೆ ಕಂಡುಬರುವಂತಹ ಬಣ್ಣದ ತುಣುಕುಗಳು ಅಥವಾ ಲೇಪನಗಳು ಅಥವಾ ಕಲೆಗಳು
(8) ವ್ಯಾಪಾರ ಅಥವಾ ವೃತ್ತಿಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಕರ್ತವ್ಯದ ಕಾಲಾವಧಿಯಲ್ಲಿ ಅವರ ಉಗುರುಗಳು, ಕಿವಿ ಮತ್ತು ಚರ್ಮದ ಮಡಿಕೆಗಳಲ್ಲಿ ಅಥವಾ ಬಟ್ಟೆಯಲ್ಲಿ ಕೃತ್ಯದ ಲಕ್ಷಣಕ್ಕೆ ಸಂಬಂಧಿಸಿದಂತೆ ಕಂಡುಬರುವಂತಹ ಧೂಳು.
(9) ತ್ಯಾಜ್ಯಗಳೊಂದಿಗೆ ಮಿಶ್ರಣಗೊಂಡಿರುವ ಲೋಹದ ತುಣುಕುಗಳು
(10) ಗಿಡಗಳ ಭಾಗಗಳು, ಬೂಷ್ಟು, ಏಕಣ ಜೀವಿಗಳು, ಮರ, ತಂಬಾಕು, ಇವುಗಳ ಭಾಗಗಳು, ಬೀಜ ಎಲೆಗಳ ತುಣುಕುಗಳು, ಗೊತಟೆಯಂತಹ ಹಲವಾರು ಗಿಡಗಳ ಉಳಿಕೆಗಳು ಮತ್ತು ಗಿಡ ಮರಗಳ ಬೂದಿಯಂತಹ ಹಸಿರು ವಸ್ತುಗಳು ಅಥವಾ ಸಾವಯವ ಸಾಕ್ಷ್ಯಗಳು.


















































