ನಾವು ಎಂಬ ಭಾವನೆಯಲ್ಲಿ ಮುಂದುವರೆಯೋಣ – ಗುಣಪಾಲ ಕಡಂಬ
ಕಾರ್ಕಳ : ನಾನು, ನೀನು ಎಂಬುವುದಕ್ಕಿಂತ ನಾವು ಎಂಬ ಭಾವನೆಯಲ್ಲಿ ಮುಂದುವರೆದಾಗ ಶಿಕ್ಷಣ ಸಂಸ್ಥೆಗಳು ಪ್ರಗತಿ ಹೊಂದುತ್ತದೆ ಎಂದು ಶಿರ್ಲಾಲು ಸರಕಾರಿ ಪದವಿ ಪೂರ್ವ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವವರಿ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ ಅಭಿಪ್ರಾಯಪಟ್ಟರು.
ಅವರು ಫೆ. 25ರಂದು ಶಿರ್ಲಾಲು ಪ್ರೌಢಶಾಲೆಯ ಬೆಳ್ಳಿ ಸಂಭ್ರಮದ ಕುರಿತಾಗಿ ನಡೆದ ಹಳೆವಿದ್ಯಾರ್ಥಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
33 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿರ್ಲಾಲು ಪ್ರೌಢಶಾಲೆಯ ಬೆಳ್ಳಿ ಹಬ್ಬವನ್ನು 2024ರ ಡಿಸೆಂಬರ್ ತಿಂಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೆಲ್ಲರೂ ನಾವು ಎಂಬ ಭಾವನೆಯಲ್ಲಿ ಶಾಲೆಯ ಅಭಿವೃದ್ಧಿಯತ್ತ ಚಿಂತಿಸೋಣ. ಪ್ರತಿಯೊಬ್ಬ ವಿದ್ಯಾರ್ಥಿಯು ನನ್ನ ಶಾಲೆ ಎಂಬ ಭಾವನೆಯಿಂದ ಜೊತೆಯಾದಾಗ ಶಾಲೆ ಪ್ರಗತಿ ಕಾಣುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯನಿರ್ವಹಿಸೋಣ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿರಾಜ್ ಜೈನ್ ಮಾತನಾಡಿ, ಸರಕಾರದ ಅನುದಾನ ಮತ್ತು ದಾನಿಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿಪರ ಕೆಲಸದತ್ತ ಯೋಜಿಸೋಣ. ಅಂತೆಯೇ ಕಾರ್ಯಕ್ರಮದ ಕುರಿತಾಗಿ ನಿರ್ದಿಷ್ಟ ಯೋಜನೆಯನ್ನು ರೂಪಿಸಿ, ಹಿರಿಯರ ಮಾರ್ಗದರ್ಶನ, ಶಿಕ್ಷಕರ ಸಲಹೆ ಸೂಚನೆಯಂತೆ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜೊತೆಯಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ನಾರಯಣ್ ಪೂಜಾರಿ ಎನ್. ಅವರು ಬೆಳ್ಳಿ ಹಬ್ಬ ಹಾಗೂ ಶಾಲೆಯ ಕಾಮಗಾರಿಯ ಕುರಿತಾದ ಮಾಹಿತಿಯನ್ನು ನೀಡಿದರು. ಕಾಲೇಜು ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಳ ಮಾತನಾಡಿ ಶಾಲೆಯ ಏಳಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದರು. ಶಿರ್ಲಾಲು ಗ್ರಾ. ಪಂ. ಮಾಜಿ ಅಧ್ಯಕ್ಷ ರಮಾನಂದ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿಗಳು ಬೆಳ್ಳಿ ಹಬ್ಬ ಮತ್ತು ಶಾಲೆಯ ಕಾಮಗಾರಿ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿದರು. ಮುಖ್ಯ ಶಿಕ್ಷಕ ನರಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ಭಾಷಾ ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.









































