ಸಿನೆಮಾ, ಧಾರಾವಾಹಿಗಳಲ್ಲಿ ದೈವಾರಾಧನೆ ಪ್ರದರ್ಶನಕ್ಕೆ ವಿರೋಧ

ಮಂಗಳೂರು: ಧಾರಾವಾಹಿ, ಸಿನಿಮಾಗಳಲ್ಲಿ ದೈವರಾಧನೆಗೆ ಅಪಮಾನವಾಗುತ್ತಿರುವ ಕುರಿತು ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ. ದೈವಾರಾಧಕರು ನಡೆಸುತ್ತಿರುವ ಹೋರಾಟಕ್ಕೆ ಇದೀಗ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬೆಂಬಲ ವ್ಯಕ್ತಪಡಿಸಿದೆ.

ಮುಂದೆ ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದ್ದಾರೆ. ಕರಾವಳಿಯಲ್ಲಿ ದೈವರಾಧನೆಗೆ ಆದರದ್ದೆ ಆದ ಮಹತ್ವವಿದೆ. ಆದರೆ ಚಲನಚಿತ್ರ, ಧಾರವಾಹಿ, ನಾಟಕಗಳಲ್ಲಿ ನಮ್ಮ ನಂಬಿಕೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಇದನ್ನು ವಿಎಚ್​ಪಿ ಮತ್ತು ಬಜರಂಗದಳ ವಿರೋಧಿಸುತ್ತದೆ. ದೈವರಾಧಕರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಚಲನಚಿತ್ರ ಮಾಡುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಸಿನಿಮಾ, ಧಾರವಾಹಿಗಳಲ್ಲಿ ದೈವದ ಕಥೆ, ಇತಿಹಾಸ, ಚರಿತ್ರೆ, ನಂಬಿಕೆ ಹೇಳಲಿ. ಆದರೆ ಕೋಲ, ನೇಮೋತ್ಸವದ ಅನುಕರಣೆ ಮಾಡಬಾರದು. ಕಾಲಿಗೆ ಗಗ್ಗರ ಹಾಕೋದಕ್ಕೆ ಒಂದು ಕ್ರಮ ಹಾಗೂ ಅದರದ್ದೇ ಆದ ರೀತಿ ನೀತಿಗಳು ಇವೆ. ವೇಷಭೂಷಣ ಹಾಕುವುದಾದರೂ ಅದರದ್ದೇ ಆದ ಮಹತ್ವವಿದೆ. ಆದರೆ ಅದೆಲ್ಲಾವನ್ನು ಗಾಳಿಗೆ ತೂರಿ ದೈವಾರಾಧನೆಯನ್ನು ಬೀದಿಗೆ ತರಲಾಗುತ್ತಿದೆ ಎಂದರು.

ಬೇರೆ ಧರ್ಮದ ದೇವರ ಫಿಲ್ಮ್ ತೆಗೆಯುವ ಧೈರ್ಯ ಇದೆಯಾ?
ದುಡ್ಡಿಗೆ, ಪ್ರಚಾರಕ್ಕಾಗಿ ದೈವಾರಾಧನೆಯನ್ನು ಚಲನಚಿತ್ರದಲ್ಲಿ ತೋರಿಸುವುದು ಸರಿಯಲ್ಲ. ಚಲನಚಿತ್ರ ನಿರ್ಮಾಪಕರಿಗೆ ತಾಕತ್ತು ಇದ್ದರೆ ಹಿಂದುಗಳು ಅಲ್ಲದ ಬೇರೆ ಸಮುದಾಯದ ಧಾರ್ಮಿಕ ಆಚರಣೆ ಚಿತ್ರೀಕರಣ ಮಾಡಲಿ. ನಾಟಕ, ಫಿಲ್ಮ್ ತೆಗೆದು ತೋರಿಸಲಿ. ಆ ಧೈರ್ಯ ಇದೆಯಾ? ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ದೈವರಾಧಕರ ಹೋರಾಟಕ್ಕೆ ಪೂರ್ತಿ ಬೆಂಬಲವನ್ನು ವಿಎಚ್​ಪಿ ಮತ್ತು ಬಜರಂಗದಳ ನೀಡುತ್ತದೆ. ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ. ಮುಂದಿನ ದಿನದಲ್ಲಿ ಮತ್ತೆ ಕೂತು ಯಾವ ರೀತಿಯ ಹೋರಾಟ ಮಾಡಬಹುದು ಎಂದು ಯೋಚಿಸುತ್ತೇವೆ ಎಂದರು.
ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಸೂಪರ್ ಹಿಟ್ ಆದ ಸಿನೆಮಾಗಳಲ್ಲಿ ಮತ್ತಿತರ ಮನೋರಂಜನಾ ಪೊರದರ್ಶನಗಳಲ್ಲಿ ದೈವಾರಾಧನೆಯನ್ನು ಯಥಾವತ್ತು ತೋರಿಸುತ್ತಿರುವುದಕ್ಕೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ದೈವದ ಕುರಿತ ಈ ಸಿನಿಮಾದ ನಂತರ ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಅನುಕರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವ ಗೀಳು ಆರಂಭವಾಯಿತು. ಚಪ್ಪಲಿ ಹಾಕಿಕೊಂಡು ಅಣಕಿಸಲಾಗಿತ್ತು. ಇದು ದೈವಭಕ್ತರ ನಂಬಿಕೆಗೆ ಘಾಸಿ ಉಂಟು ಮಾಡಿದ್ದಲ್ಲದೆ ದೈವಾರಾಧಕರ ಹೋರಾಟಕ್ಕೆ ಕಾರಣವಾಗಿದೆ.
ಕಾಂತಾರ ಭಾಗ 2ರ ನಿರ್ಮಾಣ ನಡೆಯುತ್ತಿರುವ ನಡುವೆಯೇ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷಭೂಷಣ ಧರಿಸಿ ನಟನೆ ಮಾಡಲಾಗಿತ್ತು. ಇದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅವರೀಗ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ದೈವಾರಾಧಕರು ಕೊರಗಜ್ಜನ ಮೊರೆ ಹೋಗಿದ್ದ ಘಟನೆ ನಡೆದಿತ್ತು.

















































error: Content is protected !!
Scroll to Top