ಇನ್ನೋರ್ವ ನಕ್ಸಲ್‌ ನಾಯಕ ಕೇರಳದಲ್ಲಿ ಸೆರೆ

ಕಣ್ಣೂರು: ಕರ್ನಾಟಕದ ಇನ್ನೋರ್ವ ಕುಖ್ಯಾತ ನಕ್ಸಲ್ ನಾಯಕ ಸುರೇಶ್‌ ಎಂಬಾತ ಕೇರಳದ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್​ನನ್ನು ಪೊಲೀಸರು ಕಣ್ಣೂರು ಸರಕಾರಿ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ.
ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿದಾಗ ನಕ್ಸಲ್ ಸುರೇಶ್ ಗಾಯಗೊಂಡಿದ್ದ. ಹೀಗಾಗಿ ಸುರೇಶ್​ಗೆ ಕಣ್ಣೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ವಿಚಾರ ತಿಳಿದು ಪೊಲೀಸರು ಸುರೇಶ್​ನನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಕಳೆದ 10 ವರ್ಷಗಳಿಂದ ಭೂಗತ ನಕ್ಸಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಪೊಲೀಸ್ ಇಲಾಖೆ ಸುರೇಶ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು. ಕೇರಳ ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಸುರೇಶ್ ಅಡಗಿದ್ದ. ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೇಸ್ ದಾಖಲಾಗಿವೆ. 10ಕ್ಕೂ ಅಧಿಕ ಪ್ರಕರಣಗಳಲ್ಲಿ ಸುರೇಶ್ ಪೊಲೀಸರಿಗೆ ಬೇಕಾಗಿರುವ ಆರೋಪಿ.

ಕರ್ನಾಟಕ ಕರಾವಳಿ, ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಚುರುಕಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ. ನಕ್ಸಲರ ಓಡಾಟದ ಹಿನ್ನಲೆ ಎ.ಎನ್.ಎಫ್. ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದೆ. ಮಲೆನಾಡು-ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.
ಕೇರಳದಲ್ಲಿ ಕಳೆದ ವರ್ಷ ಸೆರೆಯಾಗಿ ಜೈಲಿನಲ್ಲಿದ್ದ ಚಿಕ್ಕಮಗಳೂರಿನ ಶ್ರೀಮತಿ ಯಾನೆ ಉಣ್ಣಿಮಾಯ ಎಂಬ ನಕ್ಸಲ್‌ ನಾಯಕಿಯನ್ನು ಕೆಲದಿನಗಳ ಹಿಂದೆ ಕಾರ್ಕಳ ಪೊಲೀಸರು ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದರು. ಇದರ ಬೆನ್ನಿಗೆ ನಕ್ಸಲ್‌ ನಾಯಕ ಸುರೇಶ್‌ ಸೆರೆಯಾಗಿದ್ದಾನೆ. ಈತನೂ ಹೆಬ್ರಿ ಪರಿಸರದಲ್ಲಿ ಪಶ್ಚಿಮ ಘಟ್ಟದಲ್ಲಿ ಓಡಾಡಿಕೊಂಡಿದ್ದ ಎನ್ನಲಾಗಿದೆ.
ಬೈಂದೂರು ಪರಿಸರದಲ್ಲಿ ನಕ್ಸಲ್‌ ಓಡಾಟ ಮತ್ತೆ ಶುರುವಾಗಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ನಕ್ಸಲ್‌ ಮುಖಂಡ ಸೆರೆಯಾಗಿದ್ದಾನೆ.

















































error: Content is protected !!
Scroll to Top