ಆರೋಗ್ಯ ಧಾರ : ವರುಣ – ಮೂತ್ರ ರೋಗಕ್ಕೆ ರಾಮಬಾಣ

ಮೂತ್ರಪಿಂಡದ ಅನೇಕ ಸಮಸ್ಯೆಗಳಲ್ಲಿ ರಾಮಬಾಣವಾಗಿರುವಂತಹ ವರುಣ ಎಂಬ ಹೆಸರಿನ ಔಷಧೀಯ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ. ಕನ್ನಡದಲ್ಲಿ ಇದನ್ನು ಬಿಲ್ಪತ್ರಿ, ಆದಿರಾಜ, ದೊಡ್ಡೆಲನಗೆ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ವರುಣ, ಸೇತು, ಕುಮಾರ, ಅಶ್ಮರಘ್ನ, ಅಜಪ ಮುಂತಾದ ಹಲವು ನಾಮ ಇದಕ್ಕಿದೆ.

ಇದರ ಮರ 20 ರಿಂದ 25 ಮೀಟರ್ ಎತ್ತರ ಬೆಳೆಯುತ್ತದೆ. ಹೂವು ಎರಡರಿಂದ ಮೂರು ಇಂಚ್ ವ್ಯಾಸದ ಬಿಳಿ ಅಥವಾ ನೇರಳೆ ಬಣ್ಣ ಹೊಂದಿರುತ್ತದೆ.ಇದರ ಎಲೆಗಳು ಮೂರರಿಂದ ಐದು ಇಂಚ್ ಉದ್ದವಿದ್ದು ಮೂರು ಎಲೆಗಳು ಕೂಡಿ ಇರುತ್ತದೆ. ಒಂದು ಇಂಚು ವ್ಯಾಸದ ಫಲ ಹೊಂದಿರುತ್ತದೆ. ವಸಂತ ಋತುವಿನಲ್ಲಿ ಹೂ ಬಿಡುತ್ತದೆ ಹಾಗೂ ಫಲಗಳು ಜೂನ್ ತಿಂಗಳಲ್ಲಿ ಆಗುತ್ತವೆ. ಭಾರತದಲ್ಲಿ ಎಲ್ಲಾ ಕಡೆ ಸಿಗುವಂತಹ ಈ ವೃಕ್ಷ ಬಿಹಾರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಒರಿಸ್ಸಾ, ತಮಿಳುನಾಡಿನಲ್ಲಿ ಅಧಿಕ ಕಾಣಬಹುದು.

ಇದರ ಗುಣಗಳು
ಲಘು (ಬೇಗ ಜೀರ್ಣವಾಗುತ್ತದೆ) ಹಾಗು ರೂಕ್ಷ (ಶುಷ್ಕತೆ) ಇದರ ಗುಣ. ಸ್ವಭಾವದಲ್ಲಿ ಉಷ್ಣ ವೀರ್ಯ. ವಾತ ದೋಷ ಹಾಗೂ ಕಫ ದೋಷವನ್ನು ಸಮತೋಲನದಲ್ಲಿಡುತ್ತದೆ. ಪಿತ್ತ ದೋಷಗವನ್ನು ಹೆಚ್ಚಿಸುತ್ತದೆ .

ಪ್ರಯೋಗಿಸುವ ಅಂಗ– ಮರದ ಚಕ್ಕೆ, ಹೂವು, ಎಲೆ.
ಸೇವಿಸುವ ಪ್ರಮಾಣ– ಕಷಾಯ 40ಎಂಎಲ್.
ಸ್ವರಸ ಹತ್ತರಿಂದ ಇಪ್ಪತ್ತು ಎಂಎಲ್.

ಉಪಯೋಗಗಳು
ಇದರ ಹೂವನ್ನು ರಕ್ತಸ್ರಾವ ನಿಯಂತ್ರಣಕ್ಕಾಗಿ ಉಪಯೋಗಿಸುತ್ತಾರೆ. ಮೂಗಿನ ರಕ್ತಸ್ರಾವ, ಗುಧನಾಳದ ರಕ್ತಸ್ರಾವಗಳಲ್ಲಿ ಉಪಯುಕ್ತ. ಮಹಿಳೆಯರಲ್ಲಿ ಮುಟ್ಟಾದಾಗ ಅಧಿಕ ರಕ್ತಸ್ರಾವವಿದಲ್ಲಿ ಇದನ್ನು ಉಪಯೋಗಿಸುತ್ತಾರೆ..
ಚಕ್ಕೆಯ ಚೂರ್ಣದ ಲೇಪನ ಮಾಡುವುದರಿಂದ ಗಾಯ, ವ್ರಣ, ಉರಿಯುತ ಕಮ್ಮಿಯಾಗುವುದು.

ಕಷಾಯ ಸೇವನೆಯ ಲಾಭಗಳು
ಜ್ವರವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಜಂತುಹುಳುವನ್ನು ನಿವಾರಿಸುತ್ತದೆ.
ಹೃದಯಕ್ಕೆ ಒಳ್ಳೆಯದು.
ಪಾರ್ಶ್ವ ವಾಯು ಮಲಬದ್ಧತೆಗಳಲ್ಲಿ ಬಳಸಲಾಗುತ್ತದೆ.
ಮೂತ್ರಪಿಂಡದ ಕಲ್ಲು, ಇನ್ಫೆಕ್ಷನ್‌ಗಳಲ್ಲಿ, ಮೂತ್ರ ರೋಗಗಳಲ್ಲಿ ಅತ್ಯಂತ ಉಪಯೋಗಕಾರಿ. ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ರಕ್ತ ಶುದ್ಧಿ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರು ಇದರ ಸೇವನೆಯಿಂದ ಮುಂಬರುವ ಮೂತ್ರಪಿಂಡದ ಸಮಸ್ಯೆಯನ್ನು ದೂರ ಮಾಡಬಹುದು.

ಕಷಾಯ ಮಾಡುವ ವಿಧಾನ – ಒಂದು ಲೋಟ ನೀರಿಗೆ ಒಂದು ಚಮಚ ವರುಣ ಚಕ್ಕೆಯ ಚೂರ್ಣವನ್ನು ಹಾಕಿ, ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಸೇವಿಸಿರಿ.

ಆಯುರ್ವೇದ ಔಷಧಗಳು – ವರುಣಾದಿ ಕಷಾಯ, ಮಹಾಮಂಜಿಷ್ಟಾಧಿ ಕಷಾಯ ಮುಂತಾದವುಗಳು.





























































































































error: Content is protected !!
Scroll to Top