ಎಕ್ಸಲೆಂಟ್‌ ಕಾಲೇಜಿನಲ್ಲಿ ಎನ್‌ಸಿಸಿ ದಿನಾಚರಣೆ

ಮೂಡುಬಿದಿರೆ : ದೇಶ ರಕ್ಷಣೆಯಲ್ಲಿ ಎರಡು ವಿಚಾರಗಳಿವೆ. ಮೊದಲನೆಯದು ಬಾಹ್ಯ ರಕ್ಷಣೆ, ಎರಡನೆಯದು ಆಂತರಿಕ ರಕ್ಷಣೆ. ಬೇರೆ ರಾಷ್ಟ್ರಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಬಾಹ್ಯ ರಕ್ಷಣೆ ಬಹಳ ಮುಖ್ಯ. ಅದೇ ರೀತಿ ದೇಶದೊಳಗೆ ಉಂಟಾಗುವ ಕೋಲಾಹಲಗಳಿಗೆ ಆಂತರಿಕ ರಕ್ಷಣೆಯ ಅಗತ್ಯವಿದೆ ಎಂದು ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ನಡೆದ ಎನ್‌ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಂತರಿಕ ರಕ್ಷಣೆ ಬಾಹ್ಯ ರಕ್ಷಣೆಗಿಂತ ಹೆಚ್ಚು ಮುಖ್ಯ. ನಮ್ಮ ದೇಶದ ಚರಿತ್ರೆಯನ್ನು ಗಮನಿಸಿದರೆ ವಿದೇಶೀಯರು ಭಾರತೀಯ ರಾಜರೊಳಗೆ ಆಂತರಿಕ ಕಲಹವನ್ನು ತಂದಿಟ್ಟು ದೇಶವನ್ನು ಆಳಲಾರಂಭಿಸಿದರು. ನೂರಾರು ವರ್ಷಗಳ ಕಾಲ ವಿದೇಶೀಯರ ಆಳ್ವಿಕೆಯಲ್ಲಿ ಇರಲು ಕಾರಣ ನಮ್ಮ ದೇಶದೊಳಗಿರುವ ಒಗ್ಗಟ್ಟಿನ ಕೊರತೆ. ದೇಶದೊಳಗೆ ಯಾವುದೇ ಸಮಸ್ಯೆ ಬಾರದಂತೆ ತಡೆಗಟ್ಟಲು ಅನೇಕ ಪೋಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಆ ಪಡೆಯನ್ನು ಸೇರುವ ಅವಕಾಶ ನಿಮಗೂ ಇದೆ. ಬೇರೆ ವೃತ್ತಿಯಂತೆ ದೇಶ ಕಾಯುವ ವೃತ್ತಿಯೂ ಒಂದು ಪವಿತ್ರವಾದ ವೃತ್ತಿ. ನಿಮ್ಮ ಚಿತ್ತ ಅಂತಹ ವೃತ್ತಿಯನ್ನು ಆಯ್ದುಕೊಳ್ಳುವ ಕಡೆಗಿರಲಿ ಎಂದು ಕಾರ್ಣಿಕ್ ಅವರು ಎನ್‌ಸಿಸಿ ಕೆಡೆಟ್ ಗಳಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಎನ್‌ಸಿಸಿ ಕೆಡೆಟ್‌ಗಳ ಕೊಡುಗೆ ಅನನ್ಯವಾದದ್ದು. ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನವನ್ನು ಕಲಿಸುವುದರೊಂದಿಗೆ ಉತ್ತಮ ವೃತ್ತಿ ಜೀವನವನ್ನು ಕಲ್ಪಿಸುತ್ತದೆ. ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಈ ಸಂದರ್ಭ ಕೆಡೆಟ್‌ಗಳಿಗೆ ಶ್ರೇಣಿ ಮತ್ತು ಹಲವು ಕ್ಯಾಂಪುಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ‌ ನೀಡಲಾಯಿತು. ಕೆಡೆಟ್‌ಗಳಿಗಾಗಿ ನಡೆಸಿದ ಸ್ಪರ್ದೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಎ.ಎನ್.ಒ 18 ಕಾರ್ ಆರ್ಮಿ ಎನ್‌ಸಿಸಿ ಸಬ್ ಯೂನಿಟ್‌ನ ಲೆಫ್ಟಿನೆಂಟ್ ಮಹೇಂದ್ರ ಜೈನ್, 5 ಕಾರ್ ನೇವಲ್ ಸಬ್ ಯೂನಿಟ್‌ನ ಕೇರ್ ಟೇಕರ್ ರಾಜ್ ಪ್ರಸಾದ್, ಸೀನಿಯರ್ ಕೆಡೆಟ್ ಸ್ಪೂರ್ತಿ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.
ಸಿಪಿಎಲ್ ಮೋನಿಶ್ ಗೌಡ ಸ್ವಾಗತಿಸಿ, ಸಿಕ್ಯೂಎಂಎಸ್ ಶ್ರೇಯಾ ಪಿಳ್ಳೈ ಕಾರ್ಯಕ್ರಮ ನಿರೂಪಿಸಿದರು. ಸಿಎಸ್ಎಂ ಪೂರ್ಣಚಂದ್ರ ವಂದಿಸಿದರು.





























































































































error: Content is protected !!
Scroll to Top