ಶ್ರವಣಬೆಳಗೊಳ ಪೀಠಾಧೀಶ ಪುರಪ್ರವೇಶ

ಕಾರ್ಕಳ : ನಲ್ಲೂರು ಶ್ರೇಷ್ಠವಾಗಿರುವ ಕ್ಷೇತ್ರ. ಶ್ರವಣಬೆಳಗೊಳದ ಪೂರ್ವ ಸ್ವಾಮೀಜಿಯವರ ಪರಂಪರೆ ಈ ಕ್ಷೇತ್ರದೊಂದಿಗಿದೆ. ಹೀಗಾಗಿ ಪಟ್ಟಾಭಿಷೇಕದ ಬಳಿಕ ನಲ್ಲೂರು ಕ್ಷೇತ್ರಕ್ಕೆ ಪುರಪ್ರವೇಶ ಕೈಗೊಂಡಿರುವೆ. ಇಲ್ಲಿಂದ ನಂತರದ ವಿಹಾರವನ್ನು ಪ್ರಾರಂಭಿಸುತ್ತೇನೆ ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧೀಶ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು.
ಅವರು ನ. 28 ರಂದು ಅತಿಶಯ ಶ್ರೀ ಕೇತ್ರ ನಲ್ಲೂರು ಬಸದಿಗೆ ಪುರಪ್ರವೇಶ ಮಾಡಿ, ಶ್ರೀ ಕೂಷ್ಮಾಂಡಿನಿ ಸಭಾಭವನದಲ್ಲಿ ನಡೆದ ಗುರುವಂದನೆ – ಭಕ್ತಿ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾರ್ತಿಕ ದೀಪೋತ್ಸವದ ಪ್ರಯುಕ್ತ ಅತಿಶಯ ಕ್ಷೇತ್ರದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಉರಿಯುವ ದೀಪ ಆರಿ ಹೋಗಬಹುದು. ಆದರೆ, ಆ ದೀಪದಿಂದ ಹೊರಹೊಮ್ಮಿದ ಜ್ಞಾನ ದೀಪ ಶಾಶ್ವತವಾದುದು. ಅದು ಆತ್ಮವನ್ನು ಅಂಟಿಕೊಳ್ಳುವುದು. ಅಂತಹ ಜ್ಞಾನ ದೀಪದ ಆರಾಧನೆಯಾಗಬೇಕೆಂದು ಸ್ವಾಮೀಜಿ ನುಡಿದರು.

ಸಂತಸದಾಯಕ – ಮೂಡುಬಿದಿರೆ ಸ್ವಾಮೀಜಿ
ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಲ್ಲೂರು ಭಕ್ತರ ಭಕ್ತಿಗೆ ಒಲಿದು ಕೂಷ್ಮಾಂಡಿನಿ ದೇವರು ನೆಲೆ ನಿಂತ ಪಾವನ ಕ್ಷೇತ್ರ. ಶ್ರವಣ ಬೆಳಗೊಳದ ಸ್ವಾಮೀಜಿ ನಲ್ಲೂರು ಕ್ಷೇತ್ರಕ್ಕೆ ಪುರಪ್ರವೇಶ ಮಾಡಿರುವುದು ಸಂತಸದಾಯಕ ಎಂದರು.
ಶ್ರವಣಬೆಳಗೊಳದಲ್ಲಿ ಎರಡು ಬಾರಿ ಕನ್ನಡ ಸಾಹಿತ್ಯ ಕಾರ್ಯಕ್ರಮ ನಡೆದಿದೆ. ತಮ್ಮ ಕಾಲದಲ್ಲೂ ಸಾಹಿತ್ಯ, ಧರ್ಮ, ಸಂಸ್ಕೃತಿಯಾಧಾರಿತ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಮೂಡಬಿದಿರೆ ಸ್ವಾಮೀಜಿ ಆಶಿಸಿದರು.

ಸಮಸ್ತ ಸಮಾಜದ ಪುಣ್ಯ ಕ್ಷೇತ್ರ – ಅಭಯ್‌ ಕುಮಾರ್‌ ಜೈನ್‌
ಮಾಜಿ ಸಚಿವ ಅಭಯ್‌ ಕುಮಾರ್‌ ಜೈನ್‌ ಮಾತನಾಡಿ, ಶ್ರವಣಬೆಳಗೊಳ ಕೇವಲ ಜೈನ ಸಮುದಾಯಕ್ಕೆ ಸೀಮಿತವಾಗದೇ ಸಮಸ್ತ ಸಮಾಜದ ಪುಣ್ಯ ಕ್ಷೇತ್ರ. ಕ್ಷೇತ್ರವು ಶೈಕ್ಷಣಿಕ, ವೈದ್ಯಕೀಯ ರಂಗಕ್ಕೆ ನೀಡಿದ ಸೇವೆ ಅನನ್ಯ. ಮುಂದಿನ ದಿನಗಳಲ್ಲಿ ಶ್ರವಣಬೆಳಗೊಳದ ಬೇಡಿಕೆ ಕುರಿತು ಸರಕಾರದ ಗಮನ ಸೆಳೆಯುವಲ್ಲಿ ಪ್ರಯತ್ನಿಸಲಾಗುವುದು ಎಂದರು.

ಸಮಾಜದ ಜೀರ್ಣೋದ್ಧಾರವಾಗಲಿ- ಎಂ. ಕೆ. ವಿಜಯ ಕುಮಾರ್‌
ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಮಾತನಾಡಿ, ನಮ್ಮ ಸಮಾಜದ ಸಂಸ್ಕಾರ, ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪಸರಿಸಿದ ಕೀರ್ತಿ ಸಮುದಾಯದ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಜೈನ ಸಮುದಾಯದ ಸರ್ವತೋಮುಖ ಏಳಿಗೆಯಲ್ಲಿ ಸ್ವಾಮೀಜಿಗಳ ಪಾತ್ರ ಮಹತ್ತರ. ಸಮುದಾಯ ಒಗ್ಗೂಡುವಲ್ಲಿ ಸಮುಚ್ಛಯಗಳ ಜೀರ್ಣೊದ್ಧಾರಕ್ಕಿಂತಲೂ ಸಮಾಜದ ಜೀರ್ಣೋದ್ಧಾರವಾಗಬೇಕು. ಭಿನ್ನಾಭಿಪ್ರಾಯಗಳನ್ನು ತೊರೆದು ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಮನಸ್ಥಿತಿ ನಮ್ಮೆಲ್ಲರದ್ದಾಗಬೇಕು ಎಂದರು.

ನಲ್ಲೂರು ಬಸದಿಯ ಆಡಳಿಯ ಮೊಕ್ತೇಸರ ವಜ್ರನಾಭ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ್‌ ಜೈನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುನಿಲ್‌ ಕುಮಾರ್‌ ಬಜಗೋಳಿ ವಂದಿಸಿದರು.





























































































































error: Content is protected !!
Scroll to Top